ಮೂಡುಬಿದಿರೆ: ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿ (ನಮೂನೆ 50, 53, 57 ಅರ್ಜಿಗಳ ವಿಲೇವಾರಿ) ವಿಚಾರದಲ್ಲಿ ಯಾವುದೇ ಲೋಪವಾಗಿಲ್ಲ. ರಾಜಕೀಯ ಕಾರಣಗಳಿಗಾಗಿ ಕೆಲವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯರು ಮತ್ತು ಅನುಭವಿಗಳಾಗಿರುವ ವಾಸುದೇವ ನಾಯಕ್ ಅವರು ಯಾವ ಕಾರಣಕ್ಕೆ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿ ವಿಧಾನ ಸ್ಪಷ್ಟನೆ: ವಿವಿಧ ಅರ್ಜಿಗಳ ವಿಲೇವಾರಿ ವಿಧಾನವು ತಾಂತ್ರಿಕವಾಗಿ ವಿವಿಧ ನಿಯಮಗಳ ಅಡಿಯಲ್ಲಿ ಹಲವು ಹಂತಗಳಲ್ಲಿ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಅಥವಾ ಲೋಪವಾಗಿಲ್ಲ ಎಂದು ಶಾಸಕರು ವಿವರಿಸಿದರು. ಬಗರ್ ಹುಕುಂ ತಂತ್ರಾಂಶದ ಮೂಲಕ ನಮೂನೆ 50, 53, 57 ಅರ್ಜಿಗಳನ್ನು ವಿಲೇವಾರಿ ಮಾಡುವ ವಿಧಾನವನ್ನು ಅವರು ಹಂತ ಹಂತವಾಗಿ ವಿವರಿಸಿದರು .ಆರಂಭಿಕ ಹಂತ (VAO ಮಟ್ಟ): ಗ್ರಾಮ ಆಡಳಿತ ಅಧಿಕಾರಿಯವರು (VAO) ಮೊಬೈಲ್ ಅಪ್ಲಿಕೇಶನ್ ಮತ್ತು ಚೆಕ್ ಲಿಸ್ಟ್ ಮೂಲಕ ಸ್ಥಳ ತನಿಖೆ (ಫೀಲ್ಡ್ ವೆರಿಫಿಕೇಶನ್) ನಡೆಸಬೇಕು. ಅರ್ಜಿದಾರರ ಫೋಟೋ, ಜಮೀನಿನ ಗಡಿ ಗುರುತಿಸುವಿಕೆ, ಮಹಜರ್ ವೀಡಿಯೊ, ಇ-ಕೆವೈಸಿ ಮತ್ತು ಪಡಿತರ ಚೀಟಿ ವಿವರಗಳನ್ನು ದಾಖಲಿಸಿ, ಕಂದಾಯ ನಿರೀಕ್ಷಕರು (RI) ಮತ್ತು ADLR ಲಾಗಿನ್‌ಗೆ ರವಾನಿಸಲಾಗುತ್ತದೆ.
*ಪರಿಶೀಲನೆ ಹಂತ : ಕಂದಾಯ ನಿರೀಕ್ಷಕರು ಮತ್ತು ಶಿರಸ್ತೇದಾರರ ಪರಿಶೀಲನೆಯ ನಂತರ ತಹಶೀಲ್ದಾರರ ಲಾಗಿನ್‌ಗೆ ರವಾನೆಯಾಗುತ್ತದೆ. ತಹಶೀಲ್ದಾರರು ಹಿಂದಿನ ಶಿಫಾರಸ್ಸುಗಳನ್ನು ಪರಿಶೀಲಿಸಿ ಸಮಿತಿಯವರಿಗೆ ರವಾನಿಸಬಹುದು ಅಥವಾ ತಿರಸ್ಕರಿಸಬಹುದು.
*ಸಮಿತಿ ಹಂತ : ಸಮಿತಿ ಕಾರ್ಯದರ್ಶಿ ಲಾಗಿನ್ ಆದ ನಂತರ ಸಮಿತಿ ಸದಸ್ಯರ ಹಾಜರಾತಿ, ನಡಾವಳಿ ಅಪ್‌ಲೋಡ್ ಮತ್ತು ಇ-ಸಹಿ ಪ್ರಕ್ರಿಯೆ ನಡೆಯುತ್ತದೆ. ಸಮಿತಿಯವರು ವಿವರಗಳನ್ನು ವೀಕ್ಷಿಸಿ ಮುಂದಿನ ಹಂತಕ್ಕೆ ಶಿಫಾರಸ್ಸು ಮಾಡಬಹುದು ಅಥವಾ ತಿರಸ್ಕರಿಸಬಹುದು.
*ನಕ್ಷೆ ಮತ್ತು ಮಂಜೂರಾತಿ ಹಂತ : ಮಂಜೂರಾದ ಆದೇಶಗಳು ನೋಟಿಸ್ ಸೃಜಿಸಲು ವಿಷಯ ನಿರ್ವಾಹಕರ ಲಾಗಿನ್‌ಗೆ ಹೋಗುತ್ತದೆ. ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ, ನಕ್ಷೆ ತಯಾರಿಸಲು ಮೋಜಿಣಿ ಶಾಖೆಗೆ ರವಾನಿಸಲಾಗುತ್ತದೆ. ADLR ಹಾಗೂ DDLR ಅವರು ನಕ್ಷೆ ಅನುಮೋದಿಸಿದ ನಂತರ, ಎರಡನೇ ಬಾರಿಗೆ ಸಮಿತಿಯ ಅನುಮೋದನೆಗೆ ಸಲ್ಲಿಸಲಾಗುತ್ತದೆ.
*ಅಂತಿಮ ಹಂತ : ಸಮಿತಿಯಿಂದ ನಕ್ಷೆ ಅನುಮೋದನೆಯಾದ ನಂತರ ಪೋಡಿ ದುರಸ್ತಿಗಾಗಿ ಮೋಜಿಣಿ ಶಾಖೆಗೆ ಕಳುಹಿಸಲಾಗುತ್ತದೆ. ಪೋಡಿ ದುರಸ್ತಿಯಾದ ನಂತರ ಭೂಮಿ ತಂತ್ರಾಂಶದಲ್ಲಿ ಮಂಜೂರಾತಿಗೆ ಪ್ರಸ್ತಾವಿಸಿರುವ ವಿಸ್ತೀರ್ಣಕ್ಕೆ ಸರ್ಕಾರವು ಪಹಣಿ ಸೃಜಿಸುತ್ತದೆ.
*ಸಾಗುವಳಿ ಚೀಟಿ : ಅರ್ಜಿದಾರರು ಭೂಮೌಲ್ಯ ಮತ್ತು ಇತರೆ ಶುಲ್ಕವನ್ನು ಪಾವತಿಸಿದ ನಂತರ ತಹಶೀಲ್ದಾರರ ಲಾಗಿನ್‌ನಲ್ಲಿ ಡಿಜಿಟಲ್ ಸಾಗುವಳಿ ಚೀಟಿ ಸೃಜಿಸಲಾಗುತ್ತದೆ ಮತ್ತು ಕಾವೇರಿ ತಂತ್ರಾಂಶದ ಮೂಲಕ ನೋಂದಣಿ ಪ್ರಕ್ರಿಯೆಯಾಗಿ ಅರ್ಜಿದಾರರ ಹೆಸರಿಗೆ ಪಹಣಿ ದಾಖಲಾಗುತ್ತದೆ ಎಂದು ಶಾಸಕರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ವಕೀಲರಾದ ಬಾಹುಬಲಿ ಪ್ರಸಾದ್, ಶಾಂತಿ ಪ್ರಸಾದ್ ಹೆಗ್ಡೆ, ಪ್ರಮುಖರಾದ ಸುಕೇಶ್ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

