ಕಬ್ಬಿನಾಲೆಯ ಮತ್ತಾವು ಪ್ರದೇಶದ ನಿವಾಸಿಗಳನ್ನು ಕಾಂಗ್ರೇಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿ ಭೇಟಿ ಮಾಡಿ ಸರಕಾರ ಸೇತುವೆ ಹಾಗು ರಸ್ತೆ ನಿರ್ಮಾಣಕ್ಕಾಗಿ ರೂ 2 ಕೋಟಿ ಅನುದಾನ ಮಂಜೂರು ಮಾಡಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿ ಅವರ ಸಮಸ್ಯೆ ಪರಿಹಾರಕ್ಕಾಗಿ ನಿರಂತರ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ೨೦ ವರ್ಷಗಳಿಂದ ಇಲ್ಲಿನ ಸೇತುವೆ ಸಮಸ್ಯೆ ಪರಿಹಾರ ಕಾಣಲಿಲ್ಲ. ಈ ಪರಿಸ್ಥಿತಿಯನ್ನು ಅವಲೋಕಿಸಿ ಫೆಬ್ರವರಿ ೧೭ರಂದು ಸಚಿವ ಸತೀಶ್ ಜಾರಕಿ ಹೊಳಿಯವರು ಉಡುಪಿಗೆ ಆಗಮಿಸಿದಾಗ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಮನವಿ ಮಾಡಿದ್ದೆ. ಈ ಬಗ್ಗೆ ವಿಚಾರ ತಿಳಿದ ಸಚಿವರು ಅರಣ್ಯ ಇಲಾಖೆಯವರ ಜೊತೆಗೆ ಸಭೆ ನಡೆಸಿ ಅರಣ್ಯ ಇಲಾಖೆಯ ಸಮಸ್ಯೆ ಇತ್ಯರ್ಥಗೊಳಿಸಿ ಜಿಲ್ಲಾಧಿಕಾರಿಗೆ ತಿಳಿಸಿದ್ದರು.
ಅಲ್ಲಿಂದ ಸಚಿವರು ಬೆಂಗಳೂರಿಗೆ ತೆರಳಿದ ಬಳಿಕ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಹಣ ಮಂಜೂರು ಮಾಡುವಲ್ಲಿ ಪ್ರಯತ್ನ ಪಟ್ಟಿದ್ದಾರೆ.
ಗ್ರಾಮೀಣ ಜನರ ಸಮಸ್ಯೆ ಪರಿಹಾರ ಮಾಡಲು ತಕ್ಷಣ ಸ್ಪಂದನೆ ಮಾಡಿ ಕಳೆದ ೨೦ ವರ್ಷಗಳ ಸಮಸ್ಯೆ ಪರಿಹಾರ ಮಾಡಿದ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಈ ಸಮಸ್ಯೆ ಪರಿಹಾರ ಮಾಡಲು ಮಲೆ ಕುಡಿಯ ಸಮುದಾಯ ಕೂಡಾ ನಿರಂತೆ ಹೋರಾಟ ಮಾಡಿದೆ. ಮಲೆ ಕುಡಿಯರ ಸಮಸ್ಯರ ಈ ಬಾರಿ ಪರಿಹಾರ ಕಂಡಿರುವುದು ತನಗೆ ಕೂಡಾ ಬಹಳ ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಕಳ ಕ್ಷೇತ್ರದಲ್ಲಿ ಇನ್ನು ಕೂಡಾ ಪರಿಹಾರ ಕಾಣದ ಹಲವಾರು ಸಮಸ್ಯೆಗಳಿದ್ದು ಅದನ್ನು ಕೂಡಾ ಹಂತ ಹಂತವಾಗಿ ಸರಕಾರ ಪರಿಹಾರ ಮಾಡುತ್ತದೆ. ಸಚಿವರಿಗೆ ಇನ್ನೂ ಹಲವಾರು ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ಅದು ಕೂಡಾ ಪರಿಹಾರ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಚಂದ್ರ ಶೇಖರ ಬಾಯರಿ ಮತ್ತಿತರರು ಉಪಸ್ಥಿತರಿದ್ದರು.