ಬೈಕಾಡಿ ರೌಡಿ ಶೀಟರ್ ಕೊಲೆ ಪ್ರಕರಣ : ಇಬ್ಬರ ಬಂಧನ

0
24

ಉಡುಪಿ : ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ಅಕ್ಟೋಬರ್ 27ರಂದು ರಾತ್ರಿ ನಡೆದ ವೈಯಕ್ತಿಕ ಗಲಾಟೆಯಲ್ಲಿ ಉಡುಪಿ ಕಲ್ಯಾಣಪುರದ ಸಂತೆಕಟ್ಟೆ ನಿವಾಸಿ, ಮಲ್ಪೆ ಠಾಣೆಯ ರೌಡಿ ಶೀಟರ್ ಸುಜಿತ್ ಪಿಂಟೊ ಎಂಬುವರನ್ನು ಸ್ಟೀಲ್ ಪೈಪ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆರೋಪಿಗಳಾದ ಬೈಕಾಡಿ ಪಡುಬೈಕಾಡಿ ನಿವಾಸಿ ಪ್ರದೀಪ್ ಪೂಜಾರಿ (45) ಹಾಗೂ ಪ್ರಮೋದ್ ಪೂಜಾರಿ (39) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ

ಅಕ್ಟೋಬರ್ 27ರ ರಾತ್ರಿ 7:30ರಿಂದ 8:30ರ ಮಧ್ಯಾವಧಿಯಲ್ಲಿ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿ ಅವರು ಜೀವನ್ ಪೂಜಾರಿ ಮತ್ತು ಸುಜಿತ್ ಪಿಂಟೊ ಅವರನ್ನು ಭದ್ರಗಿರಿ ಸರ್ಕಲ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ ವೈಯಕ್ತಿಕ ವಿಚಾರವಾಗಿ ಪರಸ್ಪರ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಕೈಯಿಂದ ಹೊಡೆದಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ಪೂಜಾರಿಯು ಸುಜಿತ್ ಪಿಂಟೋನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ತಕ್ಷಣ ಪ್ರಮೋದ್ ಪೂಜಾರಿಯು ತನ್ನ ಪ್ಯಾಂಟಿನ ಹಿಂಬದಿ ಸಿಕ್ಕಿಸಿದ್ದ ಸ್ಟೀಲ್ ಪೈಪ್‌ನಿಂದ ಸುಜಿತ್ ಪಿಂಟೋನ ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿದ್ದಾನೆ. ಇದನ್ನು ತಪ್ಪಿಸಲು ಬಂದ ಜೀವನ್ ಪೂಜಾರಿ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ತಲೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಸುಜಿತ್ ಪಿಂಟೊ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಂಧಿತರಾದ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿ ಮೇಲೆ ಯಾವುದೇ ಅಪರಾಧಿಕ ಹಿನ್ನೆಲೆ ಇರಲಿಲ್ಲ. ಯಾವುದೋ ಹಣಕಾಸು ಹಾಗೂ ವೈಯಕ್ತಿಕ ವಿಚಾರಕ್ಕಾಗಿ ಅವರು ಈ ಕೃತ್ಯ ಎಸಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಕೊಲೆಯಾದ ಸುಜಿತ್ ಪಿಂಟೊ ಅಪರಾಧಿಕ ಹಿನ್ನೆಲೆ ಹೊಂದಿದ್ದು, ಮಲ್ಪೆ ಠಾಣೆಯ ರೌಡಿ ಶೀಟರ್ ಆಗಿದ್ದರು. ಈತನ ಮೇಲೆ ಉಡುಪಿ ನಗರ, ಮಲ್ಪೆ, ಹಿರಿಯಡ್ಕ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.