ವಿಧವೆ ಮೇಲಿನ ಮೋಹಕ್ಕೆ ಪತ್ನಿಯ ಹತ್ಯೆ..!

0
20

ಬೆಳಗಾವಿ : ವಿಧವೆಯೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಸಕ್ಕುಬಾಯಿ ಕೊಲೆಯಾದ ಮಹಿಳೆಯಾಗಿದ್ದು, ಆಕೆಯ ಪತಿ ಸಂತೋಷ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಂತೋಷ್ ಅಧಿಕ ಮಾಸದ ಹಿನ್ನೆಲೆ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದನು. ದೇವಸ್ಥಾನದಿಂದ ಹಿಂದಿರುಗುವ ವೇಳೆ ಜೀರಾ ಜ್ಯೂಸ್‌ನಲ್ಲಿ ಇಲಿ ಪಾಷಾಣ ಹಾಗೂ ಬಳೆಯ ಚೂರಿನ ಪುಡಿಯನ್ನು ಬೆರೆಸಿ ಪತ್ನಿಗೆ ಕುಡಿಸಿದ್ದಾನೆ ಎನ್ನಲಾಗಿದೆ.

ವಿಷ ಮಿಶ್ರಿತ ಪಾನೀಯ ಸೇವಿಸಿದ ಬಳಿಕ ಸಕ್ಕುಬಾಯಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ವೇಳೆ ಆರೋಪಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದಾದ ಬಳಿಕ ಘಟನೆ ರಸ್ತೆ ಅಪಘಾತದಂತೆ ಕಾಣುವಂತೆ ಮಾಡಲು ಮೃತಳ ಮೇಲೆ ಬೈಕ್ ಹತ್ತಿಸಿದ್ದಾನೆ. ಅಲ್ಲದೆ ತಾನೂ ಅಪಘಾತಕ್ಕೊಳಗಾದಂತೆ ರಸ್ತೆ ಬದಿಯಲ್ಲಿ ಮಲಗಿ ನಾಟಕವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರಂಭದಲ್ಲಿ ಅಪಘಾತ ಎಂದು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಕೊಲೆ ಎಂಬುದು ದೃಢಪಟ್ಟಿದೆ. ಬಳಿಕ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಪ್ರಾಥಮಿಕ ತನಿಖೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂತೋಷ್‌ಗೆ ವಿಧವೆಯೊಬ್ಬಳೊಂದಿಗೆ ಅಕ್ರಮ ಸಂಬಂಧ ಇತ್ತು ಎಂಬ ಸಂಗತಿ ಬೆಳಕಿಗೆ ಬಂದಿದ್ದು, ಇದೇ ಕಾರಣಕ್ಕಾಗಿ ಪತ್ನಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here