ಉಳ್ಳಾಲ : ನಾಟೆಕಲ್ ಪ್ರದೇಶದಲ್ಲಿ ನಡೆದ ದುರ್ಘಟನೆಯಲ್ಲಿ ಶಾಲಾ ಬಸ್ ಅಪಘಾತಕ್ಕೀಡಾಗಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿರುವುದು ಅತ್ಯಂತ ದುಃಖಕರ ಹಾಗೂ ಆತಂಕಕಾರಿ ಸಂಗತಿಯಾಗಿದೆ. ಇದೇ ಅಪಘಾತದಲ್ಲಿ ಖಾಸಗಿ ಕಂಪನಿಯ ಓರ್ವ ಸಿಬ್ಬಂದಿ ಮೃತಪಟ್ಟಿರುವುದು ಇನ್ನಷ್ಟು ನೋವು ತಂದಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಎನ್‌ಎಸ್‌ಯುಐ ಉಳ್ಳಾಲ ವಿಧಾನಸಭೆ ವತಿಯಿಂದ ಹೃತ್ಪೂರ್ವಕ ಸಂತಾಪ ವ್ಯಕ್ತಪಡಿಸುತ್ತೇವೆ.
ಈ ಘಟನೆ ಸಂಭವಿಸಿದ ತಕ್ಷಣವೇ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಯು.ಟಿ. ಖಾದರ್ ಫರೀದ್ ಅವರು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಿ, ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ವೈದ್ಯಕೀಯ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಗಾಯಗೊಂಡ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲು ಸೂಚನೆ ನೀಡಿದರು. ಅವರ ಮಾನವೀಯ ಸ್ಪಂದನೆ ಹಾಗೂ ಕ್ಷಿಪ್ರ ಕ್ರಮದಿಂದ ಗಾಯಾಳುಗಳಿಗೆ ಸಮಯೋಚಿತ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ.
ಈ ದುರ್ಘಟನೆಯ ಹಿನ್ನೆಲೆಯಲ್ಲಿ ಎನ್‌ಎಸ್‌ಯುಐ ಉಳ್ಳಾಲ ವಿಧಾನಸಭೆ ಸರ್ಕಾರದ ಮುಂದೆ ಕೆಲವು ಪ್ರಮುಖ ಬೇಡಿಕೆಗಳನ್ನು ಬಲವಾಗಿ ಮಂಡಿಸುತ್ತದೆ:
* ರಾಜ್ಯದಾದ್ಯಂತ 15 ವರ್ಷಗಳಿಗಿಂತ ಹಳೆಯದಾದ ಎಲ್ಲಾ ಶಾಲಾ ಹಾಗೂ ಕಾಲೇಜು ಬಸ್‌ಗಳನ್ನು ತಕ್ಷಣ ಹಂತ ಹಂತವಾಗಿ ಹೊಸ ವಾಹನಗಳಿಂದ ಬದಲಾಯಿಸಬೇಕು.
* ಎಲ್ಲಾ ಶಾಲಾ ಮತ್ತು ಕಾಲೇಜು ಬಸ್ ಚಾಲಕರು ಫಿಟ್ನೆಸ್ ಪ್ರಮಾಣಪತ್ರವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ, ನಿಯಮಿತ ತಾಂತ್ರಿಕ ತಪಾಸಣೆಯನ್ನು ಕಡ್ಡಾಯಗೊಳಿಸಬೇಕು.
* ಎಲ್ಲಾ ಶಾಲಾ ಹಾಗೂ ಕಾಲೇಜು ಬಸ್ ಚಾಲಕರಿಗೆ ಆರೋಗ್ಯ ತಪಾಸಣೆ, ದೃಷ್ಟಿ ಪರೀಕ್ಷೆ, ಚಾಲನಾ ಸಾಮರ್ಥ್ಯ ಮತ್ತು ಫಿಟ್ನೆಸ್ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸಬೇಕು.
* ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಲು ಸಾರಿಗೆ ಇಲಾಖೆಯು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು.
ವಿದ್ಯಾರ್ಥಿಗಳ ಜೀವದೊಂದಿಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸದಂತೆ ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎನ್‌ಎಸ್‌ಯುಐ ಉಳ್ಳಾಲ ವಿಧಾನಸಭೆ ಬಲವಾಗಿ ಆಗ್ರಹಿಸುತ್ತದೆ.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸಿ.ಎಂ. ರೌಫ್, ನಿಯಾಝ್ ಸಹಾರ, ಎನ್‌ಎಸ್‌ಯುಐ ಉಳ್ಳಾಲ ವಿಧಾನಸಭೆಯ ಅಧ್ಯಕ್ಷ ಶಾಹಿಲ್ ಮಂಚಿಲ, ಕಾರ್ಯದರ್ಶಿ ಯು.ಟಿ. ಫರೀದ್, ಕೋಟೆಕಾರ ಅಧ್ಯಕ್ಷ ಫಹೀಂ, ಉಪಾಧ್ಯಕ್ಷರಾದ ದರ್ಶನ್ ಮತ್ತು ವಿಶಾಲ್ ಲೋಬೋ, ಕಾರ್ಯದರ್ಶಿ ಶಕೀರ್ ಉಳ್ಳಾಲ ,ಶ್ರೇಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

