ಬೆಳಾಲು : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಪರಿಸರ ಸಂಘದ ಆಶ್ರಯದಲ್ಲಿ ‘ರಾಷ್ಟ್ರೀಯ ಆಯುರ್ವೇದ ದಿನ’ವನ್ನು ಇತ್ತೀಚೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಣಮ್ಯ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದ ನೀಡುತ್ತಿರುವ ಕೊಡುಗೆ ಹಾಗೂ ಅದರ ಮಹತ್ವದ ಕುರಿತು ಬೆಳಕು ಚೆಲ್ಲಿದಳು.
ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಅವರು ದಿನದ ವಿಶೇಷತೆ, ಆಯುರ್ವೇದ ಆಧಾರಿತ ಜೀವನಶೈಲಿ ಮತ್ತು ಆಯುರ್ವೇದ ಕ್ಷೇತ್ರದ ಬೆಳವಣಿಗೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅನನ್ಯ ಕೊಡುಗೆಗಳ ಬಗ್ಗೆ ವಿವರಿಸಿದರು. ಅಲ್ಲದೆ, ನಿತ್ಯಜೀವನದಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುವ ಸರಳ ಮನೆಮದ್ದುಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಆಚರಣೆಯ ಭಾಗವಾಗಿ ವಿದ್ಯಾರ್ಥಿಗಳು ಶಾಲಾ ಔಷಧೀಯ ಸಸ್ಯ ಹಾಗೂ ಹಣ್ಣು-ಹಂಪಲುಗಳ ವನಕ್ಕೆ ಭೇಟಿ ನೀಡಿ, ವಿವಿಧ ಗಿಡಮೂಲಿಕೆಗಳನ್ನು ಗುರುತಿಸಿ ಅವುಗಳ ಗುಣಧರ್ಮಗಳನ್ನು ತಿಳಿದುಕೊಂಡರು. ಇದೇ ಸಂದರ್ಭದಲ್ಲಿ ಆಯುರ್ವೇದದ ಮಹತ್ವವನ್ನು ಸಾರುವ ಜಾಗೃತಿ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

