ಮಣಿಪಾಲ : ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮುಂಬರುವ ಅಕ್ಟೋಬರ್ 14 ರಿಂದ 16 ರವರೆಗೆ ತನ್ನ ಮಣಿಪಾಲ ಕ್ಯಾಂಪಸ್ ಆವರಣದಲ್ಲಿ ಸಾಂಕ್ರಾಮಿಕ ರೋಗಗಳ ಸವಾಲುಗಳ ಕುರಿತು ಪ್ರತಿಷ್ಠಿತ ನೇಚರ್ ಕಾನ್ಫರೆನ್ಸ್ ಆಯೋಜಿಸಿದೆ.
‘ಬದಲಾಗುತ್ತಿರುವ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳ ಸವಾಲುಗಳನ್ನು ಎದುರಿಸುವುದು’ ಎಂಬ ವಿಷಯದಡಿ ನಡೆಯಲಿರುವ ಈ ಮೂರು ದಿನಗಳ ಸಮ್ಮೇಳನದಲ್ಲಿ ವಿಶ್ವದ ಅಗ್ರಗಣ್ಯ ವಿಜ್ಞಾನಿಗಳು, ಸಂಶೋಧಕರು ಹಾಗೂ ಆರೋಗ್ಯ ತಜ್ಞರು ಭಾಗವಹಿಸಲಿದ್ದಾರೆ.
ಹೊಸದಾಗಿ ಹರಡುತ್ತಿರುವ ರೋಗಕಾರಕಗಳು, ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (ಎಎಂಆರ್ – ಸೂಕ್ಷ್ಮಜೀವಿ ನಿರೋಧಕತೆ) ಮತ್ತು ಸಾಂಕ್ರಾಮಿಕ ರೋಗಗಳ ಸನ್ನದ್ಧತೆಯ ವಿರುದ್ಧ ಜಾಗತಿಕ ಮಟ್ಟದ ಹೋರಾಟದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿರುವ ಈ ಸಂದರ್ಭದಲ್ಲಿ, ಈ ಜಾಗತಿಕ ಮಟ್ಟದ ವೈಜ್ಞಾನಿಕ ಸಮಾವೇಶವು ಭಾರತದಲ್ಲಿ ನಡೆಯುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.
ನೇಚರ್ ಮೆಡಿಸಿನ್, ನೇಚರ್ ಮೈಕ್ರೋಬಯಾಲಜಿ, ನೇಚರ್ ಹೆಲ್ತ್, ನೇಚರ್ ಕಮ್ಯುನಿಕೇಷನ್ಸ್ ಮತ್ತು ಮಾಹೆ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಈ ಸಮ್ಮೇಳನ ಆಯೋಜನೆಗೊಂಡಿದೆ. ರೋಗಗಳ ಕಣ್ಗಾವಲು, ರೋಗನಿರ್ಣಯ, ಹೊಸ ಚಿಕಿತ್ಸಾ ವಿಧಾನಗಳು ಹಾಗೂ ಲಸಿಕೆ ತಂತ್ರಗಳ ಪ್ರಗತಿಯ ಬಗ್ಗೆ ಈ ಕಾರ್ಯಕ್ರಮದಲ್ಲಿ ಸುದೀರ್ಘ ಚರ್ಚೆಗಳು ನಡೆಯಲಿವೆ.
ಈ ಕುರಿತು ನೇಚರ್ ಕಮ್ಯುನಿಕೇಷನ್ಸ್ ನ ಹಿರಿಯ ಸಂಪಾದಕಿ ಸೋಂಜಾ ಶ್ಮಿಡ್ ಹಾಗೂ ನೇಚರ್ ಹೆಲ್ತ್ ನ ಹಿರಿಯ ಸಂಪಾದಕ ಲೋರೆಂಜೊ ರಿಘೆಟ್ಟೋ ಮಾತನಾಡಿ, “ಜಾಗತಿಕ ಆರೋಗ್ಯ ರಕ್ಷಣೆಯಲ್ಲಿ ಸಾಂಕ್ರಾಮಿಕ ರೋಗಗಳು ದೊಡ್ಡ ಸವಾಲಾಗಿ ಉಳಿದಿವೆ. ಈ ಸಮ್ಮೇಳನವು ಹೊಸ ಆಲೋಚನೆಗಳು ಹಾಗೂ ಪರಿಹಾರಗಳನ್ನು ಒದಗಿಸುವ ವೇದಿಕೆಯಾಗಲಿದೆ” ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಮಾಹೆ ಉಪಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, “ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಬಹುಶಿಸ್ತೀಯ ಮತ್ತು ಒಳಗೊಳ್ಳುವಿಕೆಯ ಪರಿಹಾರ ಅಗತ್ಯ. ಈ ಜಾಗತಿಕ ಮಟ್ಟದ ಸಂವಾದವನ್ನು ನಮ್ಮ ಆವರಣದಲ್ಲಿ ಆಯೋಜಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಇದು ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಹೊಸ ದಾರಿ ತೋರಿಸಲಿದೆ” ಎಂದರು.
ಅಲೆಸ್ಸಾಂಡ್ರೊ ವೆಸ್ಪಿಗ್ನಾನಿ (ಯುಎಸ್‌ಎ), ಎಲೈನ್ ಎನ್ಸೋಸಿ (ಯುಎಸ್‌ಎ), ಲಾರೆನ್ ಗಾರ್ಡ್ನರ್ (ಯುಎಸ್‌ಎ), ಮಧುಕರ್ ಪೈ (ಕೆನಡಾ), ಶಬೀರ್ ಎ. ಮಧಿ (ದಕ್ಷಿಣ ಆಫ್ರಿಕಾ), ಮತ್ತು ಮರಿಯನ್ ಕೂಪ್ಮನ್ಸ್ (ನೆದರ್ಲ್ಯಾಂಡ್ಸ್) ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಜ್ಞರು ವಿಷಯ ಮಂಡಿಸಲಿದ್ದಾರೆ.
ಇದರೊಂದಿಗೆ, ಮೀಟ್ ದಿ ಎಡಿಟರ್ಸ್ ವಿಶೇಷ ಗೋಷ್ಠಿಯಲ್ಲಿ ನೋಂದಾಯಿತ ಸಂಶೋಧಕರಿಗೆ ನೇಚರ್ ನಿಯತಕಾಲಿಕೆಯ ಸಂಪಾದಕರೊಂದಿಗೆ ನೇರವಾಗಿ ಸಂವಾದ ನಡೆಸಿ ತಮ್ಮ ಸಂಶೋಧನೆ ಪ್ರಕಟಿಸುವ ಕುರಿತು ಮಾರ್ಗದರ್ಶನ ಪಡೆಯುವ ಅಪರೂಪದ ಅವಕಾಶವೂ ಸಿಗಲಿದೆ.

