ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಕುರಿತು ನಿರ್ಮಾಪಕ ಕೆವಿಎನ್ ವೆಂಕಟ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವವನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ನಿರ್ಮಾಣದ ‘ಜನ ನಾಯಗನ್’ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಅವರು, ‘ಟಾಕ್ಸಿಕ್’ ಚಿತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಇದು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಚಿತ್ರದ ಅದ್ಧೂರಿತನ, ನಿರೂಪಣೆ ಹಾಗೂ ಕಥೆ ಹೇಳುವ ಶೈಲಿ ಸಂಪೂರ್ಣ ವಿಭಿನ್ನವಾಗಿರಲಿದೆ ಎಂದರು.
“ಸಿನಿಮಾ ಬಿಡುಗಡೆಯಾದ ಬಳಿಕ ದೊಡ್ಡ ಪರದೆಯಲ್ಲಿ ಪ್ರೇಕ್ಷಕರು ನೋಡಿದಾಗ ಖಂಡಿತವಾಗಿಯೂ ಅವರಿಗೆ ಇಷ್ಟವಾಗಲಿದೆ. ನಾವು ಹಾಕಿರುವ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಇದುವರೆಗೆ ಬಿಡುಗಡೆಯಾಗಿರುವ ಟೀಸರ್ ಹಾಗೂ ಪ್ರಚಾರ ಸಾಮಗ್ರಿಗಳು ಕೇವಲ ಕುತೂಹಲ ಹೆಚ್ಚಿಸುವುದಕ್ಕಷ್ಟೇ. ಸಿನಿಮಾದಲ್ಲಿ ಇನ್ನೂ ಅನೇಕ ಹೊಸ ಅಂಶಗಳಿವೆ,” ಎಂದು ವೆಂಕಟ್ ಹೇಳಿದರು.
ಇದೇ ವೇಳೆ, ಚಿತ್ರದ ಪೋಸ್ಟರ್‌ನಲ್ಲೇ “A Fairy Tale for Grown-Ups” (ದೊಡ್ಡವರಿಗಾಗಿ ಕಾಲ್ಪನಿಕ ಕಥೆ) ಎಂದು ಉಲ್ಲೇಖಿಸಿರುವುದನ್ನು ನೆನಪಿಸಿದ ಅವರು, ‘ಟಾಕ್ಸಿಕ್’ ಮಕ್ಕಳಿಗಾಗಿ ಅಲ್ಲ, ವಯಸ್ಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ಸಿನಿಮಾ ಎಂದು ಸ್ಪಷ್ಟಪಡಿಸಿದರು.
ಸುಮಾರು ₹500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕೆವಿಎನ್ ನಿರ್ಮಾಣ ಸಂಸ್ಥೆಯ ಅತಿ ದೊಡ್ಡ ಬಜೆಟ್‌ನ ಸಿನಿಮಾವಾಗಿದ್ದು, ಚಿತ್ರಕ್ಕೆ ಯಶ್ ಸಹ ನಿರ್ಮಾಪಕರಾಗಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್‌ಗೆ ಜೊತೆಯಾಗಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಕೆಲವು ಹಾಡುಗಳಿಗೆ ವಿಶಾಲ್ ಮಿಶ್ರಾ ಸಂಗೀತ ಸಂಯೋಜಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

