ಕಾರ್ಕಳ ಜೋಡುರಸ್ತೆಯಲ್ಲಿ ಎನ್‌ಪಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ಸ್ ನೂತನ ಮಳಿಗೆ ಉದ್ಘಾಟನೆ

0
10

ಕಾರ್ಕಳ : ಜೋಡುರಸ್ತೆಯ ಸಹಕಾರ ಸಿಂಧೂರ ಕಾಂಪ್ಲೆಕ್ಸ್‌ನ ಕೆಳ ಮಹಡಿ ಹಾಗೂ ಎರಡನೇ ಮಹಡಿಯಲ್ಲಿ ಎನ್‌ಪಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ಸ್‌ನ ನೂತನ ಮಳಿಗೆ ಉದ್ಘಾಟನೆಗೊಂಡಿತು.

ಸಭಾ ಕಾರ್ಯಕ್ರಮವನ್ನು ಎನ್‌ಪಿ ಗ್ರೂಪ್‌ನ ವಾಸುದೇವ ಭಟ್ ಅವರ ಮಾತಾ-ಪಿತರಾದ ಲಕ್ಷ್ಮೀ ಹಾಗೂ ವಾದಿರಾಜ ಭಟ್ ದಂಪತಿ ಉದ್ಘಾಟಿಸಿದರು. ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ಅಧ್ಯಕ್ಷತೆ ವಹಿಸಿದ್ದರು.

ಹೊಸ ಉದ್ಯಮಗಳನ್ನು ಪರಿಚಯಿಸಬೇಕು ಎಂಬ ಸಂಕಲ್ಪದೊಂದಿಗೆ ಆರಂಭಗೊಂಡ ಸಹಕಾರ ಸಿಂಧೂರ ಕಾಂಪ್ಲೆಕ್ಸ್ ಇದೀಗ ಕಾರ್ಯರೂಪಕ್ಕೆ ಬಂದಿದ್ದು, ಇಲ್ಲಿ ಹೊಸ ಉದ್ಯಮಗಳು ಆರಂಭಗೊಳ್ಳುತ್ತಿರುವುದು ಗ್ರಾಹಕರಿಗೂ ಅನುಕೂಲಕರವಾಗಿದೆ ಎಂದು ರವೀಂದ್ರ ಪ್ರಭು ಕಡಾರಿ ಹೇಳಿದರು.

ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಜೋಡುರಸ್ತೆ ಹಂತಹಂತವಾಗಿ ಅಭಿವೃದ್ಧಿಯಾಗುತ್ತಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಉತ್ಪನ್ನಗಳು ದೊರೆಯುವಂತಾಗಬೇಕು. ಉದ್ಯಮಿಗಳು ಪರಸ್ಪರ ಸಹಕಾರದಿಂದ ಮುನ್ನಡೆದರೆ ಸಮೂಹದ ಬೆಳವಣಿಗೆ ಸಾಧ್ಯ ಎಂದರು.

ಕೆಳ ಮಹಡಿ ಮಳಿಗೆಯನ್ನು ಉದ್ಘಾಟಿಸಿದ ಧನಲಕ್ಷ್ಮೀ ಕ್ಯಾಶೂಸ್ ಮಾಲಕ ಶ್ರೀಪತಿ ಭಟ್ ಮಾತನಾಡಿ, ಪ್ರಾಮಾಣಿಕತೆ ಹಾಗೂ ಉತ್ತಮ ಮನಸ್ಸಿನಿಂದ ನಡೆಸುವ ಉದ್ಯಮಕ್ಕೆ ಯಶಸ್ಸು ನಿಶ್ಚಿತ. ಜೋಡುರಸ್ತೆ ಪ್ರದೇಶವು ಹಿಂದಿನಿಂದಲೂ ಕಾರ್ಕಳದ ಅಭಿವೃದ್ಧಿಯೊಂದಿಗೆ ಬೆಳೆದಿರುವ ಪ್ರಮುಖ ಪ್ರದೇಶವಾಗಿದೆ ಎಂದರು.

ಎರಡನೇ ಮಹಡಿ ಮಳಿಗೆಯನ್ನು ವಿಕ್ರಮ್ ಹೆಗ್ಡೆ ಕಣಂಜಾರು ಹಾಗೂ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸಿದರು. ಕಾರ್ಕಳದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಎನ್‌ಪಿ ಗ್ರೂಪ್ ಉತ್ತಮ ಸಾಧನೆ ಮಾಡುತ್ತಿದೆ. ನೂತನ ಉದ್ಯಮದ ಮೂಲಕವೂ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿ ಎಂದು ಅವರು ಹಾರೈಸಿದರು.

ಎನ್‌ಪಿ ಗ್ರೂಪ್‌ನ ವೆಬ್‌ಸೈಟ್‌ನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಅಶ್ವತ್ ಎಸ್.ಎಲ್. ಅನಾವರಣಗೊಳಿಸಿದರು. ವಾಸುದೇವ ಭಟ್ ಅವರ ಉದ್ಯಮ ಪ್ರಯತ್ನವನ್ನು ಶ್ಲಾಘಿಸಿದ ಅವರು, ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು.

ಕಾರ್ಕಳ ಬಿಲ್ಲವ ಸಮಾಜ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಜೋಡುರಸ್ತೆ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ರಾವ್, ಜಾನ್ಸ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಜಾನ್ ಡಿ’ಸಿಲ್ವಾ, ಉದ್ಯಮಿ ಚಂದ್ರಶೇಖರ ಶೆಟ್ಟಿ, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ದ್ರೋಣ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಎನ್‌ಪಿ ಗ್ರೂಪ್ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ವಾಸುದೇವ ಭಟ್ ನೆಕ್ಕರಪಲ್ಕೆ ಮಾತನಾಡಿ, ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವ ಉದ್ದೇಶದಿಂದ ಸಂಸ್ಥೆಯು ನಿರಂತರವಾಗಿ ಹೊಸ ಉದ್ಯಮಗಳನ್ನು ಆರಂಭಿಸುತ್ತಿದೆ. ಗ್ರಾಹಕರಿಗೆ ಅಗತ್ಯವಿರುವ ವಿವಿಧ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುವಂತೆ ಮಾಡುವುದು ಸಂಸ್ಥೆಯ ಆಶಯವಾಗಿದೆ. ಗುಣಮಟ್ಟದ ಸೇವೆ ಹಾಗೂ ಗ್ರಾಹಕರ ವಿಶ್ವಾಸದೊಂದಿಗೆ ಉದ್ಯಮವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ ಎಂದರು.

ರಮೇಶ್ ಕಲ್ಲೊಟ್ಟೆ ಸ್ವಾಗತಿಸಿದರು. ಮೇಘಾ ಹಾಗೂ ಶ್ರೇಯಾ ಪ್ರಾರ್ಥಿಸಿದರು. ಮಹಿಮಾ ಕಾರ್ಯಕ್ರಮ ನಿರೂಪಿಸಿದರು.

ಎನ್‌ಪಿ ಗ್ರೂಪ್‌ನ 13ನೇ ಉದ್ಯಮವಾಗಿ ಆರಂಭಗೊಂಡಿರುವ ನೂತನ ಮಳಿಗೆಯಲ್ಲಿ ವಿವಿಧ ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ಸ್ ಒಂದೇ ಸೂರಿನಡಿ ಲಭ್ಯವಾಗಲಿವೆ.

ಮಳಿಗೆಯ ಶುಭಾರಂಭದ ಹಿನ್ನೆಲೆಯಲ್ಲಿ ಆಗಸ್ಟ್ 25ರವರೆಗೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಖರೀದಿಗೆ ಆಕರ್ಷಕ ಬಹುಮಾನ, ನೋ-ಕಾಸ್ಟ್ ಇಎಂಐ, ಗಿಫ್ಟ್ ಬೆನಿಫಿಟ್ ಹಾಗೂ ಮೆಗಾ ಲಕ್ಕಿ ಗಿಫ್ಟ್ ಹ್ಯಾಂಪರ್ ಸೇರಿದಂತೆ ಹಲವು ವಿಶೇಷ ಆಫರ್‌ಗಳನ್ನು ಸಂಸ್ಥೆ ಘೋಷಿಸಿದೆ.

ನೂತನ ಮಳಿಗೆಯ ಮೂಲಕ ಕಾರ್ಕಳ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಗುಣಮಟ್ಟದ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಮತ್ತು ಫರ್ನಿಚರ್ಸ್‌ಗಳನ್ನು ಒಂದೇ ಸ್ಥಳದಲ್ಲಿ ಖರೀದಿಸುವ ಅವಕಾಶ ದೊರೆಯಲಿದೆ.