ಬೆಂಗಳೂರು : ‘ಹೋಮ್‌ಮೇಕರ್’ (ಗೃಹಿಣಿ) ಎಂಬ ಪದವನ್ನು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಲಾಗದು. ಪುರುಷರು, ಮಹಿಳೆಯರು ಅಥವಾ ಉದ್ಯೋಗದಲ್ಲಿರುವ ವೃತ್ತಿಪರರು—ಕುಟುಂಬದ ಕಲ್ಯಾಣಕ್ಕಾಗಿ ಮನೆಯಲ್ಲಿ ಶ್ರಮಿಸುವ ಪ್ರತಿಯೊಬ್ಬರೂ ‘ಗೃಹ ನಿರ್ವಾಹಕರು’ ಎಂದು ಪರಿಗಣಿಸಬಹುದು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಗೃಹಿಣಿಗೆ ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನಿಗದಿಪಡಿಸಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸಿ ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರ ಪೀಠ ಆದೇಶಿಸಿದೆ.
ಪಶ್ಚಿಮ ಬಂಗಾಳ ಮೂಲದ ಪಂಪಪಾಲ್ ಎಂಬಾಕೆ ಕೆಎಸ್‌ಆರ್‌ಟಿಸಿ ಬಸ್ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನಿಗದಿಪಡಿಸಿದ್ದ ₹4.55 ಲಕ್ಷ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೇ ವೇಳೆ ಪಂಪಪಾಲ್‌ಗೆ ಪರಿಹಾರ ಘೋಷಿಸಿದ್ದ ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿಯೂ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು.
ಉದ್ಯೋಗದಲ್ಲಿರಲಿಲ್ಲ ಎಂಬ ಕೆಎಸ್‌ಆರ್‌ಟಿಸಿ ವಾದ
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪಂಪಪಾಲ್ ಯಾವುದೇ ಉದ್ಯೋಗದಲ್ಲಿರಲಿಲ್ಲ. ಅವರು ಉನ್ನತ ಶಿಕ್ಷಣ ಪಡೆದಿರುವುದರಿಂದ ಕೇವಲ ಗೃಹಿಣಿಯಾಗಿದ್ದರು ಎಂದು ಪರಿಗಣಿಸಲಾಗದು. ಘಟನೆ ನಡೆದ ದಿನ ಅವರು ಗೃಹಿಣಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬ ಕಾರಣಕ್ಕೆ ಭವಿಷ್ಯದ ಆದಾಯ ನಷ್ಟದ ವಿಭಾಗದಲ್ಲಿ ಪರಿಹಾರ ನೀಡಲಾಗದು ಎಂದು ಕೆಎಸ್‌ಆರ್‌ಟಿಸಿ ವಾದಿಸಿತ್ತು.
ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರ ಪೀಠ, ಗೃಹ ನಿರ್ವಾಹಕರು ಎಂದರೆ ಅನಕ್ಷರಸ್ಥರಾಗಿರಬೇಕು ಅಥವಾ ದಿನದ 24 ಗಂಟೆಯೂ ಮನೆಯಲ್ಲಿದ್ದು ಮನೆಕೆಲಸವನ್ನೇ ಮಾಡಬೇಕು ಎಂಬ ಕಲ್ಪನೆ ಸರಿಯಲ್ಲ ಎಂದು ಸ್ಪಷ್ಟಪಡಿಸಿತು.
ಕುಟುಂಬದ ಸುಖ-ಶಾಂತಿ ಮತ್ತು ಕಲ್ಯಾಣಕ್ಕಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ಶ್ರಮಿಸುವ ಪ್ರತಿಯೊಬ್ಬರೂ ಗೃಹ ನಿರ್ವಾಹಕರೇ. ಈ ಪರಿಕಲ್ಪನೆ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಪುರುಷರು ಹಾಗೂ ಉದ್ಯೋಗದಲ್ಲಿರುವವರಿಗೂ ಇದು ಅನ್ವಯಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಹೆಚ್ಚುವರಿ ₹1.96 ಲಕ್ಷ ಪರಿಹಾರ
ಪಂಪಪಾಲ್ ಅವರಿಗೆ ನ್ಯಾಯಾಧಿಕರಣ ನೀಡಿದ್ದ ಪರಿಹಾರ ಮೊತ್ತಕ್ಕಿಂತ ಹೆಚ್ಚುವರಿಯಾಗಿ ₹1,96,800 ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
2013ರ ಅಕ್ಟೋಬರ್ 19ರಂದು ಪಂಪಪಾಲ್ ಬೆಂಗಳೂರಿನಿಂದ ಮಡಿಕೇರಿಗೆ ಕೆಎಸ್‌ಆರ್‌ಟಿಸಿಯ ರಾಜಹಂಸ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡು ಶಾಶ್ವತ ದೈಹಿಕ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಸುಮಾರು ₹10 ಲಕ್ಷದವರೆಗೆ ವೆಚ್ಚವಾಗಿತ್ತು.
ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣವು ವೈದ್ಯಕೀಯ ವೆಚ್ಚ ಸೇರಿದಂತೆ ಒಟ್ಟು ₹4,55,243 ಪರಿಹಾರ ಘೋಷಿಸಿತ್ತು. ಈ ಮೊತ್ತವನ್ನು ಹೆಚ್ಚಿಸುವಂತೆ ಪಂಪಪಾಲ್ ಹೈಕೋರ್ಟ್ ಮೊರೆ ಹೋಗಿದ್ದರು.
ಅಪಘಾತಕ್ಕೂ ಮುನ್ನ ಉದ್ಯೋಗ, ಮನೆಪಾಠ
ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪಂಪಪಾಲ್, ಅಪಘಾತಕ್ಕೂ ಮುನ್ನ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದು, ಜತೆಗೆ ಮನೆಪಾಠವನ್ನೂ ಮಾಡಿಸುತ್ತಿದ್ದರು. ಇದರಿಂದ ಮಾಸಿಕ ಸುಮಾರು ₹35 ಸಾವಿರ ಆದಾಯ ಗಳಿಸುತ್ತಿದ್ದೆ. ಆದರೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗೃಹಿಣಿಯಾಗಿದ್ದೆ. ತಮ್ಮ ಶೈಕ್ಷಣಿಕ ಅರ್ಹತೆ, ಹಿಂದಿನ ಉದ್ಯೋಗ ಹಾಗೂ ಆದಾಯ ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣಿಸಿ ಪರಿಹಾರ ಹೆಚ್ಚಿಸಬೇಕು ಎಂದು ಅವರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.

