ವರದಿ :-ನರಸಿಂಹ
ವಿಶೇಷ ವರದಿ, ಬೆಳ್ತಂಗಡಿ :- ಗ್ರಾಮೀಣ ಭಾಗದ ಆಡಳಿತ ಯಂತ್ರದ ಎರಡು ಪ್ರಮುಖ ಕಣ್ಣುಗಳಂತಿರಬೇಕಾದ ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆಯ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ.
ಅಧಿಕಾರಿಗಳ ಇಂತಹ ಬೇಜವಾಬ್ದಾರಿತನಕ್ಕೆ ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಜವಾಬ್ದಾರಿಯುತ ಅಧಿಕಾರಿಗಳು ಪರಸ್ಪರ ವ್ಯತಿರಿಕ್ತ ವರದಿ ನೀಡಿರುವುದು ಸಾರ್ವಜನಿಕರಲ್ಲಿ ತೀವ್ರ ಜಿಜ್ಞಾಸೆ ಮೂಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಹೊಸಂಗಡಿ ಗ್ರಾಮದ ವ್ಯಕ್ತಿಯೊಬ್ಬರು ಸುಳ್ಳು ಮಾಹಿತಿ ನೀಡಿ ಹಕ್ಕುಪತ್ರ ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಆಕ್ಷೇಪಣೆ ವ್ಯಕ್ತವಾದಾಗ, ಅಂದಿನ ತಹಶೀಲ್ದಾರರು ಹಕ್ಕುಪತ್ರದ ಶರತ್ತುಗಳ ಉಲ್ಲಂಘನೆಯಾಗಿರುವುದನ್ನು ಮನಗಂಡು, ಹಕ್ಕುಪತ್ರವನ್ನು ರದ್ದುಗೊಳಿಸಿ ಸದರಿ ಸ್ಥಳವನ್ನು ಮರಳಿ ಸರ್ಕಾರಕ್ಕೆ ವಶಪಡಿಸಿಕೊಳ್ಳುವಂತೆ (ಮರುಹಿತಗೊಳಿಸುವಂತೆ) ಆದೇಶಿಸಿದ್ದರು.
ಅಧಿಕಾರಿಗಳ ಇಬ್ಬಂದಿ ತನ ಯಾರದ್ದು ಸತ್ಯ? ಯಾರದ್ದು ಮಿತ್ಯ?
ಈ ಇಡೀ ಪ್ರಕರಣದಲ್ಲಿ ತನಿಖಾ ವರದಿ ಸಲ್ಲಿಸುವಾಗ ಉಭಯ ಇಲಾಖೆಗಳ ಅಧಿಕಾರಿಗಳು ನೀಡಿದ ವರದಿಗಳು ಇಡೀ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ವರದಿ
ಸದರಿ ವ್ಯಕ್ತಿ ಕುಟುಂಬಕ್ಕೆ 2004 ರಿಂದ 2023ರ ವರೆಗೂ ಅಲ್ಲಿ ಮನೆ ಇತ್ತು ಮತ್ತು ಅವರು ನಿಯಮಿತವಾಗಿ ಮನೆ ತೆರಿಗೆ ಪಾವತಿಸಿದ್ದಾರೆ ಎಂದು ಪಂಚಾಯತ್ ದಾಖಲೆಗಳ ಆಧಾರದ ಮೇಲೆ ದೃಢೀಕರಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ (VAO) ಮತ್ತು ರೆವಿನ್ಯೂ ಇನ್ಸ್ಪೆಕ್ಟರ್ (RI) ವರದಿ
ಆದರೆ ಕಂದಾಯ ಇಲಾಖೆಯ ಈ ಅಧಿಕಾರಿಗಳು ವ್ಯಕ್ತಿ ಕುಟುಂಬಕ್ಕೆ ಬೇರೆ ಮನೆ ಇಲ್ಲ ಯಾವುದೇ ಮನೆ ಇರಲಿಲ್ಲ ಎಂದು ಸಂಪೂರ್ಣ ವ್ಯತಿರಿಕ್ತ ವರದಿ ನೀಡಿದ್ದಾರೆ.
ಸ್ಥಳೀಯರ ಆಕ್ರೋಶ , ಆಮಿಷದ ಶಂಕೆ?
ನಮ್ಮ ಪತ್ರಿಕೆಯ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಹಕ್ಕುಪತ್ರ ಪಡೆದ ಕುಟುಂಬಕ್ಕೆ ಹಲವು ವರ್ಷಗಳ ಹಿಂದಿನಿಂದಲೂ ಅಲ್ಲಿ ಮನೆ ಇತ್ತು ಎಂಬುದು ಇಡೀ ಗ್ರಾಮಕ್ಕೆ ತಿಳಿದಿರುವ ವಿಷಯವಾಗಿದೆ.
ಹಾಗಿರುವಾಗ, ಕಂದಾಯ ಅಧಿಕಾರಿಗಳು ಸ್ಥಳೀಯವಾಗಿ ಯಾವುದೇ ಸಾರ್ವಜನಿಕ ಮಹಜರು ನಡೆಸದೆ, ಪಂಚಾಯತಿಯ ಹಿಂದಿನ ದಾಖಲೆಗಳನ್ನು ಪರಿಶೀಲಿಸದೆ, ಏಕಾಏಕಿ ‘ಮನೆಯೇ ಇರಲಿಲ್ಲ’ ಎಂದು ಮೇಲಾಧಿಕಾರಿಗಳಿಗೆ ವರದಿ ನೀಡುವ ಅಗತ್ಯವೇನಿತ್ತು?
ಕಂದಾಯ ಅಧಿಕಾರಿಗಳು ಯಾವುದಾದರೂ ಆಮಿಷಕ್ಕೆ ಒಳಗಾಗಿ ಈ ರೀತಿ ಸುಳ್ಳು ವರದಿ ನೀಡಿದ್ದಾರೆಯೇ ಎಂಬ ಬಲವಾದ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ತನಿಖೆ ಮತ್ತು ಕ್ರಮಕ್ಕೆ ಒತ್ತಾಯ
ಸದ್ಯಕ್ಕೆ ಪ್ರಕರಣವೇನೋ ಇತ್ಯರ್ಥವಾಗಿರಬಹುದು. ಆದರೆ, ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕಣ್ಣಿಗೆ ಕಾಣುವ ಸತ್ಯವನ್ನು ಮುಚ್ಚಿಟ್ಟು ತಪ್ಪು ವರದಿ ನೀಡಿದ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ಇಲ್ಲಿ ಯಾರ ವರದಿ ಸತ್ಯ ಮತ್ತು ಯಾರದ್ದು ಸುಳ್ಳು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕಿದೆ.
ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಜರುಗಿಸಬೇಕಾದ ಅನಿವಾರ್ಯತೆ ಇದೆ.
ಗ್ರಾಮ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಗ್ರಾಮ ಆಡಳಿತ ಅಧಿಕಾರಿ (VAO) ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಇಬ್ಬರೂ ಸಮನ್ವಯತೆಯಿಂದ ಕೆಲಸ ಮಾಡಿದರೆ ಮಾತ್ರ ಗ್ರಾಮಗಳು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಈ ರೀತಿ ಇಲಾಖೆಗಳ ನಡುವಿನ ಪ್ರತಿಷ್ಠೆ ಅಥವಾ ಸ್ವಾರ್ಥಕ್ಕಾಗಿ ತಪ್ಪು ವರದಿಗಳನ್ನು ನೀಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಸರ್ಕಾರದ ಅತ್ಯುತ್ತಮ ಯೋಜನೆಗಳೂ ಹಳ್ಳ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಉನ್ನತಾಧಿಕಾರಿಗಳು ಇತ್ತ ಗಮನಹರಿಸಲಿ.

