ಸ್ವಚ್ಛತೆಯ ಕಡೆಗೆ ನಮ್ಮ ನಡೆ : ಸಚ್ಚೇರಿಪೇಟೆಯಲ್ಲಿ ಗಾಂಧಿ ಜಯಂತಿ ಆಚರಣೆ

0
2

ಸಚ್ಚೇರಿಪೇಟೆ : ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಚ್ಚೇರಿಪೇಟೆ ಇವರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿಯ ಅಂಗವಾಗಿ “ಸ್ವಚ್ಛತೆಯ ಕಡೆಗೆ ನಮ್ಮ ನಡೆ” ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛತಾ ಜಾಗೃತಿ ಹಾಗೂ ಶ್ರಮದಾನ ಅಭಿಯಾನವನ್ನು ಅ.2ರಂದು ಆಯೋಜಿಸಲಾಯಿತು.

ಕಡಂದಲೆ ಬಿ.ಟಿ. ರೋಡ್ ನಲ್ಲಿ ಅಭಿಯಾನಕ್ಕೆ ಲಯನ್ ಸುದರ್ಶನ್ ಶೆಟ್ಟಿ, ಕಡಂದಲೆ ಗುತ್ತು, ಮುಂಡ್ಕೂರು–ಕಡಂದಲೆ ಲಯನ್ಸ್ ಸೇವಾ ಟ್ರಸ್ಟ್‌ನ ಸದಸ್ಯರು ಚಾಲನೆ ನೀಡಿದರು. ಬಳಿಕ ಕಡಂದಲೆ ಬಿ.ಟಿ ರೋಡ್ ನಿಂದ ಕೊಡ್ಯಡ್ಕ ದೇವಸ್ಥಾನದವರೆಗಿನ ಪ್ರದೇಶದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡು ರಸ್ತೆ ಬದಿಯ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು.

ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಪುತ್ತಿಗೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶಶಿಧರ್ ಪಿ. ನಾಯಕ್ ಅವರು ಭಾಗವಹಿಸಿ ಗಾಂಧಿ ಜಯಂತಿಯ ಮಹತ್ವ ಹಾಗೂ ಸ್ವಚ್ಛತೆಯ ಅಗತ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಶಾಲೆಯ ಸಂಚಾಲಕರಾದ ಲ. ಕೆ. ಸತ್ಯಶಂಕರ್ ಶೆಟ್ಟಿ ಅವರು ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪಾಲಡ್ಕದ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಕೆ.ಪಿ. ಸುಚರಿತ ಶೆಟ್ಟಿ, ಸುಬ್ರಹ್ಮಣ್ಯ ಪ್ರೌಢಶಾಲೆ ಕಡಂದಲೆಯ ಮುಖ್ಯ ಶಿಕ್ಷಕ ದಿನಕರ್ ಕುಂಭಾಶಿ, ಲಯನ್ ವಿಕಾಸ್ ಶೆಟ್ಟಿ, ಮುಂಡ್ಕೂರು–ಕಡಂದಲೆ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಸುರೇಶ್ ಶೆಟ್ಟಿ, ಕಾರ್ಯದರ್ಶಿ ಲ. ಪೀಟರ್ ಮಸ್ಕರೇನಸ್ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಗೌರವ್ ಆರ್.ಕೆ. ಉಪಸ್ಥಿತರಿದ್ದರು.

ಲ. ಸತೀಶ್ ಪ್ರಭು ಅವರು ಉಪಾಹಾರದ ವ್ಯವಸ್ಥೆ ಹಾಗೂ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡರು. ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಮಹತ್ವ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಕಾರ್ಯಕ್ರಮವು ಅರ್ಥಪೂರ್ಣವಾಗಿತ್ತು. “ಸ್ವಚ್ಛ ಪರಿಸರ – ಆರೋಗ್ಯಕರ ಸಮಾಜ – ಜವಾಬ್ದಾರಿಯುತ ನಾಗರಿಕತೆ” ಎಂಬ ಸಂದೇಶದೊಂದಿಗೆ ಅಭಿಯಾನವು ನಡೆಯಿತು.