ಮಂಗಳೂರು: ಯುವ ಲೇಖಕಿ, ವಕೀಲೆ, ಸಂಶೋಧಕಿ, ವಾಗ್ಮಿ ಹಾಗೂ ಯುವ ನಾಯಕಿಯಾಗಿ ಗುರುತಿಸಿಕೊಂಡಿರುವ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರು ಸಾಹಿತ್ಯ, ಶಿಕ್ಷಣ, ಸಾಮಾಜಿಕ ಚಿಂತನೆ ಮತ್ತು ಯುವಜನರ ನಾಯಕತ್ವ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
2002ರ ಅಕ್ಟೋಬರ್ 30ರಂದು ಶಿಕ್ಷಕ ದಂಪತಿಗಳಾದ ರೊನಾಲ್ಡ್ ಮತ್ತು ನ್ಯಾನ್ಸಿ ಫೆರ್ನಾಂಡಿಸ್ ಅವರ ಪುತ್ರಿಯಾಗಿ ಜನಿಸಿದ ರೆಶೆಲ್, ಮಂಗಳೂರಿನ ಡಿಪಿಎಸ್ ಎಂಆರ್ಪಿಎಲ್ನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ಲೇಡಿಹಿಲ್ ವಿಕ್ಟೋರಿಯಾ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ರಾಜ್ಯಮಟ್ಟದ 7ನೇ ರ್ಯಾಂಕ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಶೈಕ್ಷಣಿಕ ಸಾಧನೆ ಮೆರೆದರು.
ಹಿಂದಿ ಭಾಷೆಯಲ್ಲಿ ಬಿ.ಎ. ಪದವಿ ಪಡೆದಿರುವ ಅವರು ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿಯೂ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಬಳಿಕ ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು Bharat @ 2047: Role of Youth, Surajya: Good Governance Wheel of Democracy, Voice of Nation: Youth and Politics, Essays on Collective Topics, Incredible Bharat: Vision for Viksit Bharat, Light of Education Brightens the World ಹಾಗೂ Environment: Bond of Coexistence ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.
ತಮ್ಮ ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಾಧನೆಗಳಿಗಾಗಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ, ಜೆ. ಮೌರಸ್ ಪ್ರಶಸ್ತಿ, ರವೀಂದ್ರನಾಥ ಟ್ಯಾಗೋರ್ ಸಾಹಿತ್ಯ ಪ್ರಶಸ್ತಿ, ಭಾರತೀಯ ಸಾಹಿತ್ಯ ಸನ್ಮಾನ್ ಹಾಗೂ ಸಾಹಿತ್ಯ ಕ್ಷೇತ್ರದ ಗೌರವ ಡಾಕ್ಟರೇಟ್ ಸೇರಿದಂತೆ 200ಕ್ಕೂ ಅಧಿಕ ಪ್ರಶಸ್ತಿ ಮತ್ತು ಗೌರವಗಳನ್ನು ಪಡೆದಿದ್ದಾರೆ.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಯುವಜನತೆ, ಶಿಕ್ಷಣ, ಉತ್ತಮ ಆಡಳಿತ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಈ ಸಾಧನೆಗಳ ಹಿನ್ನೆಲೆಯಲ್ಲಿ ಅವರು ‘ಯಂಗ್ ವಾಯ್ಸ್ ಆಫ್ ಇಂಡಿಯಾ’ ಎಂದೇ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ಫೆಮ್ಹಾನರ್ ನಿಯತಕಾಲಿಕವು ಅವರಿಗೆ ‘ದಾರ್ಶನಿಕ ಲೇಖಕಿ ಮತ್ತು ವಾಗ್ಮಿ 2026’ ಪ್ರಶಸ್ತಿ ನೀಡಿ ಗೌರವಿಸಿದ್ದು, ರಾಷ್ಟ್ರೀಯ ನಿಯತಕಾಲಿಕದಲ್ಲಿಯೂ ಅವರ ಸಾಧನೆಗೆ ವಿಶೇಷ ಮನ್ನಣೆ ದೊರೆತಿದೆ. ಯುವ ವಯಸ್ಸಿನಲ್ಲಿಯೇ ಬಹುಮುಖ ಪ್ರತಿಭೆಯ ಮೂಲಕ ಗುರುತಿಸಿಕೊಂಡಿರುವ ರೆಶೆಲ್ ಅವರ ಸಾಧನೆಯ ಪಯಣ ಯುವಜನತೆಗೆ ಸ್ಫೂರ್ತಿಯಾಗಿದೆ.

