ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ದೊಡ್ಡ ಕನಸು ಕಾಣಬೇಕು: ವಿಜಯ ಕೊಡವೂರು

0
14

ತೆಂಕನಿಡಿಯೂರು : ಮಕ್ಕಳ ಭವಿಷ್ಯದ ಬಗ್ಗೆ ಪ್ರತಿಯೊಬ್ಬ ಪೋಷಕರೂ ದೊಡ್ಡ ಕನಸು ಕಾಣಬೇಕು. ಆ ಕನಸು ಆರ್ಥಿಕ ಪರಿಸ್ಥಿತಿಯ ಕೊರತೆಯಿಂದ ಕುಗ್ಗಬಾರದು. ಹಣವಿಲ್ಲದಿದ್ದರೂ ದೊಡ್ಡ ಕನಸು ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಿಕಟಪೂರ್ವ ನಗರಸಭಾ ಸದಸ್ಯರಾದ ವಿಜಯ ಕೊಡವೂರು ತಿಳಿಸಿದರು.

ತೆಂಕನಿಡಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪೋಷಕರು ಹಾಗೂ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಬಡತನದ ನಡುವೆಯೇ ಬೆಳೆದು, ತಮ್ಮ ಜ್ಞಾನ, ಪರಿಶ್ರಮ ಮತ್ತು ದೃಢಸಂಕಲ್ಪದಿಂದ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಜೀವನವೇ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು ಎಂದರು.

ನಮ್ಮ ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡುವುದಷ್ಟೇ ಅಲ್ಲದೆ, ಅವರನ್ನು ರಾಷ್ಟ್ರದ ಉತ್ತಮ ನಾಯಕರನ್ನಾಗಿ ರೂಪಿಸುವ ಕನಸನ್ನು ಪೋಷಕರು ಹೊಂದಬೇಕು. ಆ ಕನಸಿನತ್ತ ಸಾಗಲು ಮನೆಯಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳನ್ನು ಶ್ರೀರಾಮನ ಆದರ್ಶಗಳಂತೆ ಸತ್ಯ, ಧರ್ಮ ಮತ್ತು ಸಂಸ್ಕಾರದ ಹಾದಿಯಲ್ಲಿ ಬೆಳೆಸಬೇಕು. ಆಗ ಮಾತ್ರ ನಮ್ಮ ಮನೆಗಳು ಸಂಸ್ಕಾರದ ಕೇಂದ್ರಗಳಾಗಿ, ನಮ್ಮ ದೇಶ ರಾಮರಾಜ್ಯದ ಕಲ್ಪನೆಯತ್ತ ಸಾಗಲು ಸಾಧ್ಯ ಎಂದು ವಿಜಯ ಕೊಡವೂರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ್ ಕರಬ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.