ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ದಾಳಿ : 3.8 ಕೆಜಿ ಗಾಂಜಾ ಪತ್ತೆ

0
25

ಮಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆತನಿಂದ 3 ಕೆಜಿ 800 ಗ್ರಾಂ ಗಾಂಜಾ ಸೇರಿದಂತೆ ಒಟ್ಟು ₹3.94 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನವೆಂಬರ್ 5ರಂದು ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಬಳಿ ಗಾಂಜಾ ಮಾರಾಟ ಮಾಡಲು ವ್ಯಕ್ತಿಯೊಬ್ಬ ಬಂದಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಪುತ್ತೂರು ಪಡ್ಡಾಯೂರು ನಿವಾಸಿ ಮೊಹಮ್ಮದ್ ನಿಸಾರ್ (23) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು ₹1.90 ಲಕ್ಷ ಮೌಲ್ಯದ 3.8 ಕೆಜಿ ಗಾಂಜಾ, ₹4 ಸಾವಿರ ನಗದು ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ಸುಮಾರು ₹2 ಲಕ್ಷ ಮೌಲ್ಯದ ಕೆಎಲ್ 14 1662 ನೋಂದಣಿ ಸಂಖ್ಯೆಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ವಿವಿಧೆಡೆ ಗಾಂಜಾ ಮಾರಾಟದ ಆರೋಪ

ಆರೋಪಿಯು ಸುರತ್ಕಲ್, ಪಣಂಬೂರು, ಕಾವೂರು ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆಯೂ ಹಲವು ಬಾರಿ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 137/2026ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 20(b)(i)(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.