ಮಂಗಳೂರು : ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ, ಇ-ಕೆವೈಸಿ ಮಾಹಿತಿ ಹಾಗೂ ನ್ಯಾಯಬೆಲೆ ಅಂಗಡಿಗಳ ವಿರುದ್ಧದ ದೂರುಗಳ ತ್ವರಿತ ಪರಿಹಾರಕ್ಕಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ ಯೋಜನೆಯನ್ನು ಜಾರಿಗೆ ತರಲು ಇಲಾಖೆ ಸಿದ್ಧತೆ ನಡೆಸಿದೆ.
ಮುಂದಿನ ಎರಡು ರಿಂದ ಮೂರು ತಿಂಗಳೊಳಗೆ ಈ ಡಿಜಿಟಲ್ ವ್ಯವಸ್ಥೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.
ಪ್ರಸ್ತುತ ರೇಷನ್ ಕಾರ್ಡ್, ಅನ್ನಭಾಗ್ಯ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು 1967 ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ 200 ರಿಂದ 300ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿದ್ದು, ಮ್ಯಾನುಯಲ್ ವ್ಯವಸ್ಥೆಯಿಂದ ಸಮಸ್ಯೆಗಳ ಪರಿಹಾರಕ್ಕೆ ವಿಳಂಬವಾಗುತ್ತಿದೆ. ಇದನ್ನು ನಿವಾರಿಸಲು ಸಹಾಯವಾಣಿಯನ್ನು ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಾಗಿ ಪರಿವರ್ತಿಸಲಾಗುತ್ತಿದೆ.
ವಾಟ್ಸಾಪ್‌ನಲ್ಲೇ ರೇಷನ್ ಮಾಹಿತಿ
ಹೊಸ ವ್ಯವಸ್ಥೆಯಲ್ಲಿ ಧ್ವನಿ ಆಧಾರಿತ ಚಾಟ್‌ಬಾಟ್ ಅಳವಡಿಕೆಯಾಗಲಿದ್ದು, ಪಡಿತರ ಚೀಟಿದಾರರು ತಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ:
- ಕುಟುಂಬ ಸದಸ್ಯರ ಇ-ಕೆವೈಸಿ ಮಾಹಿತಿ
- ನಿಯೋಜಿತ ನ್ಯಾಯಬೆಲೆ ಅಂಗಡಿಯ ವಿವರ
- ಕಳೆದ ಆರು ತಿಂಗಳ ಪಡಿತರ ವಿತರಣೆಯ ವಿವರ
- ವಿವಿಧ ಪಡಿತರ ಯೋಜನೆಗಳ ಮಾಹಿತಿ
ಇತ್ಯಾದಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.
ಪರಿಹಾರ ಸಿಗದಿದ್ದರೆ ನೇರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕ
ಒಂದು ವೇಳೆ ಚಾಟ್‌ಬಾಟ್ ಮೂಲಕ ಸಮಸ್ಯೆ ಪರಿಹಾರವಾಗದಿದ್ದರೆ, ಕರೆಗಳನ್ನು ನೇರವಾಗಿ ಇಲಾಖೆಯ ಅಧಿಕಾರಿಗಳಿಗೆ ವರ್ಗಾಯಿಸುವ ವ್ಯವಸ್ಥೆಯೂ ಇರಲಿದೆ. ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಬಗೆಹರಿಸುವ ಉದ್ದೇಶದಿಂದ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
‘ಮೇರಾ ರೇಷನ್’ ಆಪ್ ಬಳಕೆಗೆ ಉತ್ತೇಜನ
ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ Mera Ration ಬಳಕೆಗೆ ಉತ್ತೇಜನ ನೀಡುತ್ತಿದೆ. ಈ ಆಪ್ ಮೂಲಕ ಬಳಕೆದಾರರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳ ಮಾಹಿತಿ, ಪೋರ್ಟಬಿಲಿಟಿ ಸೌಲಭ್ಯದಡಿ ಪಡೆದಿರುವ ಪಡಿತರ ವಿವರಗಳು ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಬಹುದು.
ಆಹಾರ ಇಲಾಖೆಯ ಈ ಹೊಸ ಕ್ರಮದಿಂದ ರಾಜ್ಯದ ಲಕ್ಷಾಂತರ ಪಡಿತರ ಚೀಟಿದಾರರಿಗೆ ತ್ವರಿತ ಸೇವೆ ಲಭಿಸುವುದರ ಜೊತೆಗೆ ದೂರುಗಳ ಪರಿಹಾರ ಪ್ರಕ್ರಿಯೆಯೂ ಮತ್ತಷ್ಟು ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ.

