ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ : ಸ್ವಾಮಿ ಯುಗೇಶಾನಂದಜೀ

0
7

ಮಂಗಳೂರು : ನಗರದ ಮಂಗಳಾದೇವಿ ಸಮೀಪದ ಶ್ರೀ ರಾಮಕೃಷ್ಣ ಮಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ಅಕ್ಟೋಬರ್ ತಿಂಗಳ ಎರಡು ವಾರಗಳ ಯೋಗ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಬಾಲಕಾಶ್ರಮದ ವಾರ್ಡನ್ ಸ್ವಾಮಿ ಯುಗೇಶಾನಂದಜೀ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನಿಯಮಿತ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯದೊಂದಿಗೆ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದರು. ಯೋಗವು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ವ್ಯಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಿಯಮಿತ ಅಭ್ಯಾಸದಿಂದ ದೇಹದ ನಮ್ಯತೆ, ಶಕ್ತಿ ಮತ್ತು ಸಮತೋಲನ ಹೆಚ್ಚುವುದರ ಜೊತೆಗೆ ಮಾನಸಿಕ ಸ್ಪಷ್ಟತೆಯೂ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಯೋಗದ ವಿವಿಧ ಭಂಗಿಗಳು, ಉಸಿರಾಟದ ವ್ಯಾಯಾಮಗಳು ಹಾಗೂ ವಿಶ್ರಾಂತಿ ತಂತ್ರಗಳು ನರಮಂಡಲವನ್ನು ಬಲಪಡಿಸಿ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡಲು ಸಹಕಾರಿಯಾಗುತ್ತವೆ. ಜಾಗೃತ ಹಾಗೂ ಆರೋಗ್ಯಕರ ಜೀವನಶೈಲಿಗೆ ಯೋಗವು ಪೂರಕವಾಗಿದೆ ಎಂದು ಅವರು ಹೇಳಿದರು.

ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಹಾಗೂ ಅದರ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಅವರ ಶಿಷ್ಯರಾದ ಸುಮಾ, ಭಾರತಿ, ಚಂದ್ರಹಾಸ ಬಾಳ ಹಾಗೂ ಪ್ರೇಮ ಸಹಕರಿಸಿದರು.

ಯೋಗಾಭ್ಯಾಸದಲ್ಲಿ ಆಸಕ್ತಿ ಹೊಂದಿರುವವರು ಶಿಬಿರಕ್ಕೆ ನೋಂದಾಯಿಸಿಕೊಳ್ಳಲು ಶ್ರೀ ರಾಮಕೃಷ್ಣ ಮಠದ ಆಶ್ರಮ ಕಚೇರಿಯನ್ನು ಸಂಪರ್ಕಿಸಬಹುದು. ಸಂಪರ್ಕ: 0824-2414412.