ಹಿರಿಯ ಯಕ್ಷಗಾನ ವಿದ್ವಾಂಸ, ಶಿಕ್ಷಕ ಮತ್ತು ಪ್ರಸಂಗಕರ್ತ ದಿ| ಸೀತಾನದಿ ಗಣಪಯ್ಯ ಶೆಟ್ಟರ ಹೆಸರಿನಲ್ಲಿ ವರ್ಷಂಪ್ರತಿ ಕೊಡಮಾಡುವ ಪ್ರಶಸ್ತಿಗೆ ಈ ಬಾರಿ ಮುಂಬಯಿ ಮಹಾನಗರದ ಹಿರಿಯ ಅರ್ಥಧಾರಿ, ಸಂಘಟಕರು ಮತ್ತು ಸಮಾಜ ಸೇವಾ ಕಾರ್ಯಕರ್ತರಾದ ಕೆ.ಕೆ.ಶೆಟ್ಟಿ ಆಯ್ಕೆಯಾಗಿದ್ದಾರೆ. ಅವರಿಗೀಗ 90 ರ ತುಂಬು ಹರೆಯ. 39 ನೇ ಸೀತಾನದಿ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
ಪಡುಬಿದ್ರಿ ನಡ್ಸಾಲಿನ ಕೃಷಿಕ ಕುಟುಂಬದಲ್ಲಿ ದಿ| ಕಾಡ್ಯ ಶೆಟ್ಟಿ ಮತ್ತು ಚಿಕ್ಕಿ ಶೆಟ್ಟಿ ದಂಪತಿಗೆ 1936 ಮೇ 5 ರಂದು ಜನಿಸಿದ ಕೆ.ಕುಟ್ಟಿ ಶೆಟ್ಟರು ಅವರಾಲ್ ಮಟ್ಟಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದರು. 1950ರಲ್ಲಿ ತನ್ನ ಹದಿನಾಲ್ಕನೇ ವಯಸ್ಸಿಗೆ ಮುಂಬಯಿ ಮಹಾನಗರವನ್ನು ಸೇರಿದರು. ಅಲ್ಲಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ದುಡಿಯುತ್ತಾ ಮೊಗವೀರ ರಾತ್ರಿ ಶಾಲೆಯಲ್ಲಿ ಕಲಿಕೆಯನ್ನು ಮುಂದುವರಿಸಿದರು. ಮುಂದೆ ಸ್ವತಂತ್ರ ಉದ್ಯಮವನ್ನು ನಡೆಸುವುದರೊಂದಿಗೆ ಹಲವು ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡರು.

ಯಕ್ಷಗಾನ ತಾಳಮದ್ದಳೆಯ ಕಡೆ ಆಸಕ್ತರಾಗಿದ್ದ ಕೆ.ಕೆ. ಶೆಟ್ಟರು ಮಾಣಿಯೂರು ಶಂಕರ ಶೆಟ್ಟರ ಪ್ರೇರಣೆಯಿಂದ ಅರ್ಥಧಾರಿಯಾಗಿ ಬೆಳೆದರು. ಶ್ರೀಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ರೇರೋಡ್ ಮತ್ತು ಶ್ರೀ ಶಾರದಾ ಯಕ್ಷಗಾನ ಮಂಡಳಿ ಬೈಕಲಾ ಮೂಲಕ ಹಿರಿಯ ಕಿರಿಯ ಕಲಾವಿದರೊಂದಿಗೆ ತಮ್ಮ ಅರ್ಥಗಾರಿಕೆಯನ್ನು ಮುಂದುವರಿಸಿದರು. ಕರ್ಣ, ವಾಲಿ, ಜರಾಸಂಧ, ಕೌರವ, ಭೀಷ್ಮ, ಪರಶುರಾಮ, ಕೃಷ್ಣ, ಅರ್ಜುನ, ರಾವಣ ಮೊದಲಾದ ಪಾತ್ರಗಳಲ್ಲಿ ಖ್ಯಾತಿ ಗಳಿಸಿದರು. ಮುಂಬೈಯ ತಮ್ಮ ಓರಗೆಯ ಕಲಾವಿದರೊಂದಿಗೆ ಮಾತ್ರವಲ್ಲದೆ ತವರೂರಿನ ಹಿರಿಯ ಅರ್ಥಧಾರಿಗಳಾದ ಶೇಣಿ, ಸಾಮಗರು,ಜೋಶಿ,ಮುದ್ರಾಡಿ, ಸಿದ್ಧಕಟ್ಟೆಯವರೊಂದಿಗೂ ತಾಳಮದ್ದಳೆ ಕೂಟಗಳಲ್ಲಿ ಅವರು ಭಾಗವಹಿಸಿದ್ದಾರೆ.
ಮುಂಬಯಿಯಲ್ಲಿ ‘ಯಕ್ಷಮಿತ್ರ’ ಎಂಬ ಸಂಘಟನೆಯನ್ನು ಸ್ಥಾಪಿಸಿ ಪೆರಣಂಕಿಲ ಹರಿದಾಸ್ ಭಟ್, ಬಳ್ಕುಂಜೆ ಗೋಪಾಲ ಶೆಟ್ಟಿ, ಅಡ್ವೆ ವಾಸು ಶೆಟ್ಟಿ, ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ದೇವಲ್ಕುಂದ ಭಾಸ್ಕರ ಶೆಟ್ಟಿ, ಕೋಲ್ಯಾರು ರಾಜು ಶೆಟ್ಟಿ, ಶೇಣಿ ಶ್ಯಾಮ ಭಟ್ ಮೊದಲಾದವರ ಸಹಕಾರದಿಂದ ಮಹಾನಗರದ ವಿವಿಧೆಡೆ ತಾಳಮದ್ದಳೆ ಕೂಟಗಳನ್ನು ಆಯೋಜಿಸಿದ ಶೆಟ್ಟರು ಕಲಾವಿದರ ಸಮ್ಮಾನ, ಸಂಸ್ಮರಣೆಗಳನ್ನು ನಡೆಸಿ ಯಕ್ಷರಸಿಕರ ಮನಗೆದ್ದರು. ಮುಂಬಯಿಯ ಯಕ್ಷಗಾನ ಸಂಸ್ಥೆಗಳಿಗೆ, ಊರಿನ ಕಲಾವಿದರಿಗೆ ಆಪ್ತರೆನಿಸಿದರು. ಕಣಂಜಾರು ಆನಂದ ಶೆಟ್ಟಿ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ (2018) ಸೇರಿದಂತೆ ಹಲವು ಗೌರವ – ಸಮ್ಮಾನಗಳನ್ನು ಅವರು ಪಡೆದಿದ್ದಾರೆ.
ಕಲಾವಿದರಿಗೆ ಆಪತ್ಕಾಲದಲ್ಲಿ ನೆರವಾಗುವುದಲ್ಲದೆ ಹಲವು ಬಡ ಮಕ್ಕಳಿಗೆ ವಿದ್ಯಾರ್ಜನೆಗಾಗಿ ಸಹಕರಿಸಿರುವುದು ಅವರ ಔದಾರ್ಯಕ್ಕೆ ಸಾಕ್ಷಿ. 1967ರಲ್ಲಿ ನೇತ್ರಾವತಿ ಶೆಟ್ಟಿ ಪರಾರಿ ಬಳ್ಕುಂಜೆ ಅವರನ್ನು ವಿವಾಹವಾಗಿ ಓರ್ವ ವೈದ್ಯ ಪುತ್ರಿ ಶಾಲಿನಿ ವಿ.ಶೆಟ್ಟಿ ಮತ್ತು ಉದ್ಯಮಶೀಲರಾದ ಗಣೇಶ್ ಶೆಟ್ಟಿ (ನೆಸ್ಲೆ), ಶ್ರೀಕಾಂತ್ ಶೆಟ್ಟಿ (ಸಿಎ) ಎಂಬ ಈರ್ವರು ಗಂಡು ಮಕ್ಕಳೊಂದಿಗೆ ನವಿ ಮುಂಬಯಿ ವಾಶಿಯ ತಮ್ಮ ನಿವಾಸದಲ್ಲಿ ಸಂತೃಪ್ತ ಜೀವನ ಸಾಗಿಸುತ್ತಿರುವ ಶೆಟ್ಟರು ತೊಂಭತ್ತರ ಇಳಿವಯಸ್ಸಿನಲ್ಲಿಯೂ ಯಕ್ಷಗಾನ ಮತ್ತು ಸಾರ್ವಜನಿಕ ರಂಗದಲ್ಲಿ ಸಕ್ರಿಯರು.
ಅ.10ಕ್ಕೆ ಪ್ರಶಸ್ತಿ ಪ್ರದಾನ
ಇದೇ ಅಕ್ಟೋಬರ.10 ರಂದು ಮುಂಬಯಿಯ ಥಾಣೆ ಆರ್. ನೆಸ್ಟ್ ಹಾಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಕೆ.ಕೆ.ಶೆಟ್ಟರು 2026 ನೇ ಸಾಲಿನ ‘ಸೀತಾನದಿ ಪ್ರಶಸ್ತಿ’ಯನ್ನು ಸ್ವೀಕರಿಸುವರು. ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡುವರು. ಪೊಲ್ಯ ಉಮೇಶ ಶೆಟ್ಟಿ ಸಂಸ್ಮರಣಾ ಭಾಷಣ ಮಾಡುವರು. ಪ್ರೊ. ಎಸ್.ವಿ.ಉದಯಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡುವರು.
ಇದೇ ಸಂದರ್ಭದಲ್ಲಿ ದಿ| ಸೀತಾನದಿಯವರು ಬರೆದ ಐದು ಪ್ರಸಂಗಗಳ ಸಂಕಲನವನ್ನು ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ ಬಿಡುಗಡೆಗೊಳಿಸುವರು. ಸೀತಾನದಿ ಜಯರಾಮ ಶೆಟ್ಟಿ, ಇರುವೈಲು ದಾಮೋದರ ಶೆಟ್ಟಿ ಮತ್ತು ಪ್ರತಿಷ್ಠಾನದ ಕಾರ್ಯದರ್ಶಿ ಎಸ್. ಅಶೋಕಕುಮಾರ್ ಶೆಟ್ಟಿ ಉಪಸ್ಥಿತರಿರುವರು.
ಕೊನೆಯಲ್ಲಿ ಪ್ರಕಾಶ್ ಕಿರಾಡಿ ಮತ್ತು ಬಳಗದಿಂದ ‘ಬ್ರಹ್ಮ ಕಪಾಲ’ ಯಕ್ಷಗಾನ ಪ್ರದರ್ಶನವಿದೆ.
ವರದಿ : ಭಾಸ್ಕರ ರೈ ಕುಕ್ಕುವಳ್ಳಿ

