ಉಡುಪಿ : ಮಾದಕ ದ್ರವ್ಯ ಸಾಗಾಟ, ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಶೇಖ್ (34) ಎಂಬಾತನನ್ನು ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 76 ಬಡಗಬೆಟ್ಟು, ಕೊಳಂಬೆ ಮಿಷನ್ ಕಂಪೌಂಡ್ ನಿವಾಸಿಯಾಗಿರುವ ಇಕ್ಬಾಲ್ ವಿರುದ್ಧ ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾದ ಮಂಗಳೂರು ಅವರು ಆ.13ರಂದು ಬಂಧನ ಆದೇಶ ಹೊರಡಿಸಿದ್ದರು. ಅದರಂತೆ ಪೊಲೀಸರು ಇಕ್ಬಾಲ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಂಧಿತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಮಣಿಪಾಲ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಐದು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಇನ್ನು ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿರುವ ಇಕ್ಬಾಲ್ ಶೇಖ್‌ನನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.
ಮಾದಕ ದ್ರವ್ಯ ಸಾಗಾಟ, ಮಾರಾಟ ಹಾಗೂ ಸೇವನೆಯಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಮುಂದುವರಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಾನೂನುಬದ್ಧವಾಗಿ ನಿರಂತರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

