ಮೂಡುಬಿದಿರೆ : ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಪಾಡಿಕಲ್ಲಿನ PFC ಮೈದಾನದ ಸಮೀಪವಿರುವ ಸುಮಾರು 25 ಮನೆಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಂಡಿ-ಹೊಂಡಗಳಿಂದ ತುಂಬಿರುವ ಈ ರಸ್ತೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸಂಪೂರ್ಣ ಹಾಳಾಗಿರುವ ಕಾರಣ, ಹಲವು ಮನೆಗಳವರು ತಮ್ಮ ಸ್ವಂತ ವಾಹನಗಳನ್ನು ಮನೆಗೆ ತರಲು ಸಾಧ್ಯವಾಗದೆ, ಬೇರೆಡೆ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆ ದುರಸ್ತಿಗೆ ಸಂಬಂಧಿಸಿ ಹಲವು ವರ್ಷಗಳಿಂದ ಗ್ರಾಮಸಭೆಗಳಲ್ಲಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರತಿ ಚುನಾವಣೆಯ ಸಂದರ್ಭದಲ್ಲೂ ರಸ್ತೆ ಕಾಂಕ್ರೀಟ್ ಮಾಡುವ ಭರವಸೆ ನೀಡಲಾಗುತ್ತಿದೆಯಾದರೂ, ಇದುವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ಈ ರಸ್ತೆಯ ಗುಂಡಿಗಳು ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಿವೆ ಎಂದರೆ, ಒಂದು ಸಣ್ಣ ಮಗು ಕಾಲು ಜಾರಿ ಗುಂಡಿಗೆ ಬಿದ್ದರೆ ಆಗುವ ಅನಾಹುತವನ್ನು ಊಹಿಸಲೂ ಸಾಧ್ಯವಿಲ್ಲ. ಇಂತಹ ದುಸ್ಥಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಬಗ್ಗೆ ಗ್ರಾಮಸ್ಥರು ತೀರ್ಮಾನಿಸುವ ಸಾಧ್ಯತೆಯಿದೆ” ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ವರದಿ : ಜಗದೀಶ್ ಪೂಜಾರಿ ಕಡಂದಲೆ

