ತೆಂಕನಡಿಯೂರಿನ ಪೊಟ್ಟುಕೆರೆ ರಸ್ತೆ ದುಸ್ಥಿತಿ : 75 ಕುಟುಂಬಗಳ ನಿತ್ಯದ ನರಕಯಾತನೆ – ಅಭಿವೃದ್ಧಿಗೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ ಆಗ್ರಹ

0
27

ಉಡುಪಿ, ಜು. 25 : ಉಡುಪಿ ಜಿಲ್ಲೆಯ ತೆಂಕನಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಟ್ಟುಕೆರೆ ಸಂಪರ್ಕ ರಸ್ತೆ ಕಳೆದ 30–40 ವರ್ಷಗಳಿಂದ ಕಚ್ಚಾ ರಸ್ತೆಯಾಗಿಯೇ ಉಳಿದಿದ್ದು, ಈ ರಸ್ತೆಯನ್ನು ಅವಲಂಬಿಸಿರುವ ಸುಮಾರು 75 ಕುಟುಂಬಗಳು ನಿತ್ಯ ಸಂಕಷ್ಟ ಅನುಭವಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರತಿಷ್ಠಿತ ಬಡಾವಣೆಗಳಿರುವ ಈ ಪ್ರದೇಶದಿಂದ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದ್ದರೂ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುವುದರಿಂದ ಶಾಲಾ ಮಕ್ಕಳ ಸಂಚಾರ ದುಸ್ತರವಾಗಿದ್ದು, ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಹರಿಯುವ ಮಳೆ ನೀರು ಹಾಗೂ ಕೆಸರು ಸಮೀಪದ ಮನೆಗಳ ಅಂಗಳಕ್ಕೆ ನುಗ್ಗಿ ನಿವಾಸಿಗಳ ಜೀವನವನ್ನು ಇನ್ನಷ್ಟು ಕಷ್ಟಕರಗೊಳಿಸಿದೆ.

ಇದೇ ರಸ್ತೆಯ ಮೂಲಕ ಹರಿದುಬರುವ ತ್ಯಾಜ್ಯ ನೀರು ಪೊಟ್ಟುಕೆರೆಗೆ ಸೇರುತ್ತಿದ್ದು, ಸುತ್ತಮುತ್ತಲಿನ ಬಡಾವಣೆಗಳ ತ್ಯಾಜ್ಯ ನೀರು ಹಾಗೂ ಕಸದ ರಾಶಿಯಿಂದ ಕೆರೆ ಮಾಲಿನ್ಯಗೊಳ್ಳುತ್ತಿದೆ. ಪರಿಣಾಮ ಸಂಜೆ ವೇಳೆಗೆ ಸೊಳ್ಳೆಗಳ ಕಾಟ ಹೆಚ್ಚುತ್ತಿದ್ದು, ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ನಗರಸಭೆ, ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ತಕ್ಷಣ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪೊಟ್ಟುಕೆರೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಉದ್ಯಾನವನ, ಮಕ್ಕಳ ಉದ್ಯಾನ ಹಾಗೂ ಸುಸಜ್ಜಿತ ಪಾರ್ಕ್ ನಿರ್ಮಿಸಬೇಕು. ಕೆರೆಯ ಸುತ್ತಲಿನ ಎಲ್ಲಾ ಸಂಪರ್ಕ ರಸ್ತೆಗಳನ್ನು ಕಾಂಕ್ರೀಟ್‌ಗೊಳಿಸಿ, ಪ್ರಮುಖ ಸಂಪರ್ಕ ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಸಾರ್ವಜನಿಕರ ಪರವಾಗಿ ಧ್ವನಿಯಾಗಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕರಾದ ಸತೀಶ್ ಪೂಜಾರಿ ಕೀಳಂಜಿ ಅವರು, ಈ ಭಾಗದ ಜನರು ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಸಂಬಂಧಿಸಿದ ಇಲಾಖೆಗಳು ತುರ್ತು ಕ್ರಮ ಕೈಗೊಂಡು ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.