ಮುದ್ರಾಡಿ ನೆಲ್ಲಿಕಟ್ಟೆ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಚಿಣ್ಣರ ಕಲರವ

0
26

ಹೆಬ್ರಿ : ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಚಿಣ್ಣರ ಕಲರವ ಕಾರ್ಯಕ್ರಮವು ಜ.17 ರಂದು ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಸರಕಾರ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿಯವರು ಮಾತನಾಡಿ ಮುಚ್ಚುವ ಹಂತದಲ್ಲಿರುವ ಈ ಶಾಲೆಗೆ ಮುಖ್ಯ ಶಿಕ್ಷಕರಾಗಿ ನೇಮಕವಾದ ರವೀಂದ್ರ ಹೆಗ್ಡೆ ಯವರು ತನ್ನ ಸೇವಾವಧಿಯಲ್ಲಿ ಊರವರ ಸಹಕಾರದಿಂದ ಸರ್ವಾಂಗೀಣ ಅಭಿವೃದ್ಧಿಪಡಿಸಿ ಶಾಲೆಯ ಚಿತ್ರಣವೇ ಬದಲಾಗುವಂತೆ ಮಾಡಿದರು, ಕಾರ್ಕಳ ತಾಲೂಕಿನಲ್ಲಿ ಪ್ರಥಮವಾಗಿ ಕನ್ನಡ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಎಲ್. ಕೆ. ಜಿ, ಯು.ಕೆ.ಜಿ ಕ್ಲಾಸನ್ನು ತನ್ನ ಸ್ವಂತ ಖರ್ಚು ಮಾಡಿ ತರಗತಿ ಗಳನ್ನು ಪ್ರಾರಂಭಿಸಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ ಶಾಲೆಯ ಶಿಕ್ಷಣ ಮಟ್ಟವನ್ನು ಸುಧಾರಿಸಿದರು,ಮಕ್ಕಳು ರಾಜ್ಯ ಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಿಂಚಿ ಶಾಲೆಗೆ, ನಾಡಿಗೆ ಕೀರ್ತಿ ತರುವಂತರಾಗಲಿ ಎಂದರು.

ಮಕ್ಕಳಿಗೆ ಪೋಷಕರ ಪ್ರೋತ್ಸಾಹ,ಮತ್ತು ಶಿಕ್ಷಕರ ಭೋಧನೆಯಿಂದಾಗಿ ಬಾಲ್ಯದಿಂದಲೇ ಮಕ್ಕಳು ಕಲಿಕೆಯಲ್ಲಿ ಅಭಿವೃದ್ಧಿ ಹೊಂದುತ್ತಾರೆ, ಮಕ್ಕಳು ವಿವಿಧ ಕ್ಷೇತ್ರದಲ್ಲಿ ಪ್ರತಿಭಾವಂತರಾಗಲು ಚಿಣ್ಣರ ಕಲರವ, ಸಾಂಸ್ಕೃತಿಕ, ಮನೋರಂಜನೆ, ಸ್ಪರ್ಧೆಗಳು ಈ ಹಂತದಲ್ಲೇ ಅತೀ ಅಗತ್ಯ ಎಂದು ಅತಿಥಿಗಳಾಗಿ ಆಗಮಿಸಿದ ಹೆಬ್ರಿ ತಾಲೂಕು ತಹಶೀಲ್ದಾರ್ ಎಸ್.ಎ. ಪ್ರಸಾದ್ ಹೇಳಿದರು.

ಮುದ್ರಾಡಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯರಾದ ಗಣಪತಿ ಎಂ, ಹೆಬ್ರಿ ಜೆ.ಸಿ.ಐ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಪೈ, ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಅಧ್ಯಕ್ಷರಾದ ಸುನೀತ ಹೆಬ್ಬಾರ್ ರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶಾಲಾ ಮಕ್ಕಳಿಂದ, ಅಂಗನವಾಡಿ ಮಕ್ಕಳಿಂದ ವಿವಿಧ ವಿನೋಧಾವಳಿಗಳು, ಶಿಕ್ಷಕರು, ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಹಳೆ ವಿದ್ಯಾರ್ಥಿಗಳು,ಪೋಷಕರಿಗೆ ಬಹುಮಾನ, ಪ್ರತಿಭಾ ಪುರಸ್ಕಾರ,ಕಲಿಕಾ ಪ್ರೋತ್ಸಾಹ ಬಹುಮಾನ, ಹಳೆ ವಿದ್ಯಾರ್ಥಿಯಾಗಿದ್ದ ರ‍್ಯಾಂಕ್ ವಿದ್ಯಾರ್ಥಿನಿಗೆ ಬಹುಮಾನ,ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪುರಸ್ಕಾರ, ಸನ್ಮಾನ ಕಾರ್ಯಕ್ರಮಗಳು ನಡೆಯಿತು.

ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ವತಿಯಿಂದ ಕೊಡಮಾಡಿದ 2000 ರೂ. ಸ್ಕಾಲರ್ ಶಿಪ್ ಹಾಗೂ ಕಲಿಕಾ ಪ್ರೋತ್ಸಾಹಧನ ವಾಗಿ ರೂ. 5000 ವನ್ನು ಮಕ್ಕಳಿಗೆ ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಅಧ್ಯಕ್ಷರಾದ ಸುನೀತ ಹೆಬ್ಬಾರ್ ಮತ್ತು ಅಲಯನ್ಸ್ ಕ್ಲಬ್ ಹೆಬ್ರಿ ಇದರ ಕಾರ್ಯದರ್ಶಿಯವರಾದ ಬಾಲಚಂದ್ರ.ಎಂ. ಹಸ್ತಾಂತರಿಸಿದರು.

ಸಭೆಯ ಅಧ್ಯಕ್ಷತೆ ಯನ್ನು ಮುದ್ರಾಡಿ ಗ್ರಾಮ ಪಂಚಾಯತ್ ವಸಂತಿ ಪೂಜಾರಿ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುನೀತ, ಸ್ಥಳೀಯ ಮುಖಂಡರಾದ ಅಶೋಕ ಪೂಜಾರಿ,ಅಂಗನವಾಡಿ ಶಿಕ್ಷಕಿ ವಿದ್ಯಾ,ಶಾಲಾ ವಿದ್ಯಾರ್ಥಿ ನಾಯಕಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕರಾದ ರವೀಂದ್ರ ಹೆಗ್ಡೆಯವರು ಸ್ವಾಗತಿಸಿ ವರದಿ ವಾಚನ ನೆರವೇರಿಸಿದರು, ಶಿಕ್ಷಕಿ ಶೋಭಾ ನಿರೂಪಿಸಿದರು,ಶಿಕ್ಷಕಿ ಅಮೃತ ವಂದಿಸಿದರು,ಶಾಲಾ ಶಿಕ್ಷಕಿಯರು ಸಹಕರಿಸಿದರು. ಬಳಿಕ ಪೋಷಕರಿಂದ ಮತ್ತು ಶಿಕ್ಷಕರಿಂದ ತುಳು ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here