ಉಡುಪಿ: ಇಂದಿನ ತಾಂತ್ರಿಕ ಯುಗದಲ್ಲಿ ಒತ್ತಡ ನಿವಾರಣೆ, ಏಕಾಗ್ರತೆ ಸಿದ್ಧಿಯ ಜೊತೆಗೆ ಭಗವಂತನನ್ನು ಒಲಿಸಿಕೊಳ್ಳುವ ಸುಲಭ ವಿಧಾನ ಭಜನೆ. ಭಜನೋತ್ಸವದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗುವಂತಾಗಲಿ. ಭಜನಾ ಸಂಸ್ಕೃತಿಯ ಗತ ವೈಭವ ಮರುಕಳಿಸುವಂತಾಗಲಿ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ ಇದರ ಆಶ್ರಯದಲ್ಲಿ ದೇವಳದ ಶ್ರೀ ಭವಾನಿ ಮಂಟಪದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಭಜನೋತ್ಸವ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನವನ್ನಿತರು.
ದಾಸವರೇಣ್ಯರು ರಚಿಸಿರುವ ಭಜನೆಗಳು ವೇದ, ಉಪನಿಷತ್ ಗಳ ಸತ್ವಗಳನ್ನೊಳಗೊಂಡಿರುವ ಜೊತೆಗೆ ತತ್ವಾದರ್ಶಗಳನ್ನು ಸಾರುವ ಅತ್ಯಮೂಲ್ಯ ಕೃತಿಗಳಾಗಿವೆ. ಸರಳ ಭಾಷೆಯಲ್ಲಿರುವ ಭಜನೆ ಮಾನಸಿಕ ನೆಮ್ಮದಿ ಮತ್ತು ಭಗವಂತನ ಸಾಕ್ಷಾತ್ಕಾರಕ್ಕೆ ರಹದಾರಿಯಾಗಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಯುವ ಜನತೆಯ ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸದೃಢ ಮನಸ್ಥಿತಿಗೆ ಭಜನೆಯೊಂದೇ ಪರಿಹಾರ ಮಾರ್ಗವಾಗಿದೆ. ವಿದ್ಯಾರ್ಥಿಗಳ ಸಹಿತ ಎಲ್ಲ ವಯೋಮಾನದ ಜನತೆ ನಾಡಿನ ಭವ್ಯ ಪರಂಪರೆ ಮತ್ತು ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಮೌಲ್ಯಾಧಾರಿತ ಭಜನೆಯ ಸದುಪಯೋಗವನ್ನು ಪಡೆಯುವುದು ಇಂದಿನ ಅಗತ್ಯತೆಯಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ಜಿಲ್ಲಾ ನಿರ್ದೇಶಕ ಬಿ.ನಾಗರಾಜ ಶೆಟ್ಟಿ, ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಮಲ್ಪೆ ಶ್ರೀ ವಿಠೋಬ ಭಜನಾ ಮಂದಿರ – ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಜನ ಜಾಗೃತಿ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್., ಸುಬ್ರಹ್ಮಣ್ಯ ಆಚಾರ್ಯ ಹಿರಿಯಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಾಶoಸನೆಗೈದರು.
ಭಜನೋತ್ಸವದ ಆಯೋಜನೆಗೆ ಆಶ್ರಯದಾತರಾಗಿ ಸಹಕಾರ ನೀಡಿದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರನ್ನು ಉಡುಪಿ ತಾಲೂಕು ಭಜನಾ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷೆ ವಜ್ರಾಕ್ಷಿ ಪಿ. ದಾಸ್, ವಲಯಗಳ ಸಂಯೋಜಕರಾದ ಪ್ರದೀಪ್ ಕುಮಾರ್, ಲತಾ ನಾಯ್ಕ್, ರೂಪಾಶ್ರೀ, ಶೋಭಾ ಪೂಜಾರಿ, ಯೋಜನೆಯ ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರಭಾವತಿ, ಸೇವಾ ನಿರತೆ ಹೇಮಾ, ಒಕ್ಕೂಟದ ಅಧ್ಯಕ್ಷೆ ಸವಿತಾ ಸಂತೋಷ್ ಸಹಿತ ಯೋಜನೆಯ ಪ್ರಮುಖರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.
ಭಜನಾ ಪರಿಷತ್ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು. ಉಪನ್ಯಾಸಕಿ ನಳಿನಾ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

