ಬೆಂಗಳೂರು : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಗುದ್ದಾಟ ಕೊನೆಗೂ ಅಂತ್ಯಗೊಂಡಿದೆ. ಸಿದ್ದರಾಮಯ್ಯನವರು ಇಂದು (ಮೇ 28) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರ ಮೂರು ವರ್ಷಗಳ ರಾಜ್ಯಭಾರ ಅಂತ್ಯವಾಗಿದ್ದು, ಮುಂದಿನ ಸಿಎಂ ಡಿಕೆ ಶಿವಕುಮಾರ್ ಎನ್ನಲಾಗಿದೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನಕ್ಕೆ ಸಕಲ ಸಿದ್ಧತೆ ನಡೆಸಿದ್ದು, ಪ್ರಮಾಣವಚನಕ್ಕೆ ಮುಹೂರ್ತ ನೀಡುವಂತೆ ಜ್ಯೋತಿಷಿ ಮೊರೆ ಹೋಗಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಅಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಸಿಎಲ್ಪಿ ಸಭೆ, ಹೊಸ ಸಚಿವ ಸಂಪುಟ ಹಾಗೂ ಡಿಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅದಕ್ಕೂ ಮೊದಲ ಡಿಕೆ ಶಿವಕುಮಾರ್ ಅವರು ಜ್ಯೋತಿಷಿ ದ್ವಾರಕನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಪ್ರಮಾಣವಚನಕ್ಕೆ ಒಳ್ಳೆ ಮುಹೂರ್ತ ನೋಡಿ ಎಂದು ಮನವಿ ಮಾಡಿದ್ದಾರೆ. ಮೂರು ಬೇರೆ ಬೇರೆ ದಿನಾಂಕಗಳನ್ನು ನೀಡುವಂತೆ ಮನವಿ ಮಾಡಿದ್ದು, ಪ್ರಮಾಣವಚನಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬರುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ, ಪ್ರಮಾಣವಚನ ಯಾವಾಗ ಏನು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

