ಕಾಸರಗೋಡು ಕನ್ನಡ ಗ್ರಾಮದಲ್ಲಿ ‘ಗೋ-ಕುಟೀರ’ ಉದ್ಘಾಟನೆಗೆ ಸಿದ್ಧತೆ: ದಾನಿಗಳ ಸಹಕಾರಕ್ಕೆ ಮನವಿ

0
74

ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಕಾಸರಗೋಡು ಗೋ-ಕುಟೀರ’ದ ಕಾಮಗಾರಿ ಪ್ರಗತಿಯಲ್ಲಿದ್ದು, ಉದ್ಘಾಟನೆಗೆ ಸಿದ್ಧತೆ ನಡೆಯುತ್ತಿದೆ.

ದೇಸಿ ಗೋವುಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸುಮಾರು ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋ-ಕುಟೀರವನ್ನು ಧಾರ್ಮಿಕ ಹಾಗೂ ಶ್ರದ್ಧಾ ಕೇಂದ್ರವಾಗಿ ರೂಪಿಸುವ ಯೋಜನೆಯನ್ನು ಪ್ರತಿಷ್ಠಾನ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗೋ-ಭಕ್ತರು, ಗೋ-ಪೋಷಕರು ಹಾಗೂ ದಾನಿಗಳು ಆರ್ಥಿಕ ಸಹಾಯ, ಸಹಕಾರ ಮತ್ತು ಪ್ರೋತ್ಸಾಹ ನೀಡುವಂತೆ ಮನವಿ ಮಾಡಲಾಗಿದೆ.

ಗೋ-ಕುಟೀರಕ್ಕೆ ಆಗಮಿಸುವ ಭಕ್ತರಿಗೆ ಗೋವುಗಳಿಗೆ ಗೋ-ಗ್ರಾಸ ನೀಡುವುದು, ಗೋ-ಆರತಿ ಬೆಳಗುವುದು, ಗೋ-ಸಂಕೀರ್ತನೆ ನಡೆಸುವುದು ಹಾಗೂ ಪ್ರಾರ್ಥನೆ ಸಲ್ಲಿಸುವ ಅವಕಾಶ ಕಲ್ಪಿಸುವ ಉದ್ದೇಶವಿದೆ. ಕುಟುಂಬದ ಶುಭ ಸಮಾರಂಭಗಳ ಸಂದರ್ಭದಲ್ಲಿಯೂ ಗೋ-ಕುಟೀರಕ್ಕೆ ಭೇಟಿ ನೀಡಿ ಗೋಮಾತೆಯ ಸೇವೆ ಸಲ್ಲಿಸಿ ಸಂಭ್ರಮ ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.

ಗೋ-ಕುಟೀರದ ಆವರಣದಲ್ಲಿ ಗೋ-ಭಕ್ತರು ಹಾಗೂ ದಾನಿಗಳ ಸಹಕಾರದೊಂದಿಗೆ ಗೋವುಗಳಿಗೆ ಅಗತ್ಯವಾದ ಹಸಿರು ಹುಲ್ಲು ಸೇರಿದಂತೆ ಗೋ-ಗ್ರಾಸವನ್ನು ಬೆಳೆಸುವ ಯೋಜನೆಯೂ ಇದೆ.

‘ಕೃಷಿ ಕುಟೀರ’ ಸೇರಿದಂತೆ ಹಲವು ಯೋಜನೆ

ಗೋ-ಕುಟೀರದ ಪರಿಸರದಲ್ಲಿರುವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ‘ಕಾಸರಗೋಡು ಕೃಷಿ ಕುಟೀರ’ ನಿರ್ಮಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಬ್ಯಾಂಕ್‌ಗಳು, ಉದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳು, ದೇವಸ್ಥಾನ, ಮಠ, ಮಂದಿರ ಹಾಗೂ ಟ್ರಸ್ಟ್‌ಗಳ ಸಹಕಾರ ಮತ್ತು ಪ್ರಾಯೋಜಕತ್ವದಲ್ಲಿ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶವಿದೆ.

ಕೃಷಿ ಕುಟೀರದಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡುವುದರ ಜತೆಗೆ ಗ್ರಾಮೀಣ ವಿದ್ಯಾರ್ಥಿಗಳು, ಯುವಜನರು ಹಾಗೂ ಮಹಿಳೆಯರಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ, ಡಿಸೈನಿಂಗ್, ಕಂಪ್ಯೂಟರ್, ಡಿಜಿಟಲ್ ಮಾಧ್ಯಮ ಹಾಗೂ ಎಐ ಆಧಾರಿತ ತರಬೇತಿ ಚಟುವಟಿಕೆಗಳನ್ನು ನಡೆಸಲು ಯೋಜಿಸಲಾಗಿದೆ.

ಇದರೊಂದಿಗೆ ಗ್ರಾಮೀಣ ಜಾನಪದ ವಸ್ತು ಸಂಗ್ರಹಾಲಯ, ಕಾಸರಗೋಡು ಕನ್ನಡ ಪತ್ರಿಕಾ ಮ್ಯೂಸಿಯಂ, ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್, ಗ್ರಂಥಾಲಯ, ಸಾಹಿತ್ಯ ಕುಟೀರ ಹಾಗೂ ಭಜನಾ ಸಂಕೀರ್ತನಾ ಕುಟೀರ ಸ್ಥಾಪಿಸುವ ಕಾರ್ಯಯೋಜನೆಯೂ ಇದೆ.

ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಿಗಾಗಿ ರಜಾ ದಿನಗಳಲ್ಲಿ ಗುರುಕುಲ ಮಾದರಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಜಾನಪದ, ಇತಿಹಾಸ, ರಂಗಭೂಮಿ, ಯಕ್ಷಗಾನ ಹಾಗೂ ಪ್ರಾದೇಶಿಕ ಜಾನಪದ ಕಲಾ ವೈವಿಧ್ಯದ ತರಬೇತಿ ಮತ್ತು ಚಟುವಟಿಕೆಗಳನ್ನು ನಡೆಸಲು ‘ಕಾಸರಗೋಡು ಸಂಸ್ಕೃತಿ ಕುಟೀರ’ ಸ್ಥಾಪಿಸುವ ಉದ್ದೇಶವಿದೆ.

ಇದರ ಜತೆಗೆ ‘ನಮ್ಮ ಮನೆ’ ಎಂಬ ವಿಶ್ರಾಂತಿ ಗೃಹ (ರೆಸ್ಟ್ ಹೌಸ್) ನಿರ್ಮಿಸುವ ಯೋಜನೆಯನ್ನೂ ಪ್ರತಿಷ್ಠಾನ ರೂಪಿಸಿದೆ.

ದೇಣಿಗೆ, ಸಹಕಾರಕ್ಕೆ ಮನವಿ

ಕಾಸರಗೋಡು ಗೋ-ಕುಟೀರ ಹಾಗೂ ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಸಾರ್ವಜನಿಕರು, ಗೋ-ಭಕ್ತರು, ಗೋ-ಪೋಷಕರು ಹಾಗೂ ದಾನಿಗಳ ಸಹಕಾರ ಅಗತ್ಯವಿದೆ. ಆಸಕ್ತರು ದೇಣಿಗೆ ನೀಡಿ ಯೋಜನೆಗೆ ಬೆಂಬಲ ನೀಡುವಂತೆ ಪ್ರತಿಷ್ಠಾನ ಮನವಿ ಮಾಡಿದೆ.

ಸಂಪರ್ಕ: ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಗೋ-ಕುಟೀರ, ಕನ್ನಡ ಗ್ರಾಮ, ಕಾಸರಗೋಡು–671121.

ಮೊಬೈಲ್: 9448572016
ಇ-ಮೇಲ್: shivaramakasaragod@gmail.com
ಗೂಗಲ್ ಪೇ: 9448572016

ಈ ಯೋಜನೆಯ ಕುರಿತು ಹೆಚ್ಚಿನ ಜನರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಪ್ರಕಟಣೆಯನ್ನು ವಾಟ್ಸ್ಆ್ಯಪ್ ಗ್ರೂಪ್‌ಗಳು, ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಪ್ರತಿಷ್ಠಾನ ಮನವಿ ಮಾಡಿದೆ.