ಮಂಗಳೂರು : ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿ-2026 ಅಕ್ಟೋಬರ್ 29ರಂದು ಮಂಗಳೂರಿನ ಪ್ರೆಸಿಡೆನ್ಸಿ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಪ್ರೆಸಿಡೆನ್ಸಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ರೋಚಕ ಪಂದ್ಯಗಳು ನಡೆದಿದ್ದು, ಕ್ರೀಡಾಪಟುಗಳು ತಮ್ಮ ಕೌಶಲ್ಯ, ತಂಡದ ಒಗ್ಗಟ್ಟು ಹಾಗೂ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.

ವಾಮಂಜೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು. ಮಂಗಳೂರು ಡಿಡಿಪಿಯು ಎಚ್.ಎಚ್. ರಾಜೇಶ್ವರಿ, ಅಕ್ರೆಡಿಟೇಶನ್ ಮತ್ತು ಕಾರ್ಪೊರೇಟ್ ರಿಲೇಶನ್ಸ್ ವಿಭಾಗದ ರಿಜಿಸ್ಟ್ರಾರ್ ಡಾ. ಮೃಣ್ಮಯ್ ಬಿಸ್ವಾಸ್, ಸಹಾಯಕ ನಿರ್ದೇಶಕ ಡಾ. ಅರುಣ್ ದೇವರಾಜ್, ಕ್ಯಾಂಪಸ್ ಅಧಿಕಾರಿ ಪ್ರಜ್ಞಾ ಶೆಟ್ಟಿ ಹಾಗೂ ಪ್ರೆಸಿಡೆನ್ಸಿ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಶೆಣೈ ಉಪಸ್ಥಿತರಿದ್ದರು.

ಅತಿಥಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು, ಪರಿಶ್ರಮ, ದೃಢಸಂಕಲ್ಪ ಮತ್ತು ಕ್ರೀಡಾಸ್ಫೂರ್ತಿಯ ಮಹತ್ವವನ್ನು ತಿಳಿಸಿದರು.
ಪಂದ್ಯಾವಳಿಯ ಫಲಿತಾಂಶಗಳು:
ಬಾಲಕಿಯರ ವಿಭಾಗ
- ಪ್ರಥಮ ಸ್ಥಾನ: ಸೇಂಟ್ ಅಲೋಶಿಯಸ್ ಕಾಲೇಜು
- ದ್ವಿತೀಯ ಸ್ಥಾನ: ಟಿಎಲ್ಸಿ ಪಿಯು ಕಾಲೇಜು
- ಅತ್ಯುತ್ತಮ ಆಟಗಾರ್ತಿ (MVP): ಸಾನ್ವಿ – ಸೇಂಟ್ ಅಲೋಶಿಯಸ್ ಕಾಲೇಜು
- ಅತ್ಯುತ್ತಮ ಶೂಟರ್: ಹಿತೈಕ್ಷಿ – ಟಿಎಲ್ಸಿ ಪಿಯು ಕಾಲೇಜು
ಬಾಲಕರ ವಿಭಾಗ
- ಪ್ರಥಮ ಸ್ಥಾನ: ಸೇಂಟ್ ಅಲೋಶಿಯಸ್ ಕಾಲೇಜು
- ದ್ವಿತೀಯ ಸ್ಥಾನ: ಟಿಎಲ್ಸಿ ಪಿಯು ಕಾಲೇಜು
- ಅತ್ಯುತ್ತಮ ಆಟಗಾರ (MVP): ಇಯಾನ್ – ಟಿಎಲ್ಸಿ ಪಿಯು ಕಾಲೇಜು
- ಅತ್ಯುತ್ತಮ ಶೂಟರ್: ಶಶ್ವತ್ – ಸೇಂಟ್ ಅಲೋಶಿಯಸ್ ಕಾಲೇಜು
ಪಂದ್ಯಾವಳಿಯ ಎರಡೂ ವಿಭಾಗಗಳಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು ಪ್ರಶಸ್ತಿ ಗೆದ್ದುಕೊಂಡರೆ, ಟಿಎಲ್ಸಿ ಪಿಯು ಕಾಲೇಜು ರನ್ನರ್ಅಪ್ ಸ್ಥಾನ ಪಡೆಯಿತು. ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ತಂಡದ ಒಗ್ಗಟ್ಟು, ಶಿಸ್ತು ಮತ್ತು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಯ ಮಹತ್ವವನ್ನು ಸಾರುವ ಮೂಲಕ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

