ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಸೊತ್ತು ಕಳ್ಳತನ

0
90

ಮುಲ್ಕಿ : ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಮಂಗಳವಾರ ಮಧ್ಯರಾತ್ರಿ ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಕಳ್ಳರು ಲಕ್ಷಾಂತರ ಮೌಲ್ಯದ ಸೊತ್ತು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಕಳ್ಳರು ದೈವಸ್ಥಾನದ ಪ್ರಧಾನ ರಸ್ತೆಯಲ್ಲಿ ಬಂದು ದೈವಸ್ಥಾನದ ಹಿಂಭಾಗದಲ್ಲಿರುವ ನೀರಿನ ಟ್ಯಾಂಕ್ ಬಳಿಯಿಂದ ಆವರಣ ಗೋಡೆಯ ಹತ್ತಿ ದೈವಸ್ಥಾನದ ಒಳಗಡೆ ಬಂದು ಗರ್ಭಗುಡಿಯ ಬಾಗಿಲಿನ ಬೀಗವನ್ನು ಭಾರವಾದ ಸಾಧನದಿಂದ ತುಂಡರಿಸಿ ಒಳಭಾಗದಲ್ಲಿದ್ದ ದೈವದ ಬೆಳ್ಳಿಯ ಮೊಗ, ಸೊಂಟದ ಪಟ್ಟಿ- 2 ,ದೈವದ ಕಡ್ಸಲೆ ಸೇರಿ ಸುಮಾರು 35 ರಿಂದ 40ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸೊತ್ತುಗಳನ್ನು ಕಳ್ಳತನ ಮಾಡಿದ್ದಾರೆ. ಬಳಿಕ ಕಳ್ಳರು ದೈವಸ್ಥಾನದ ಎರಡು ಕೋಣೆಯ ಬೀಗಗಳನ್ನು ಮುರಿದು ಕೋಣೆಯನ್ನು ಜಾಲಾಡಿದ್ದಾರೆ.

ಕಳ್ಳ ಕಪ್ಪು ಕೋಟ್ ಧರಿಸಿಕೊಂಡು ಗೇರುಕಟ್ಟೆ ಬಳಿಯಿಂದ ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಪ್ರಧಾನ ರಸ್ತೆಯಲ್ಲಿ ನಡೆದುಕೊಂಡು ಬಂದು ದೈವಸ್ಥಾನದ ಆವರಣ ಗೋಡೆ ಬಳಿ ಮಧ್ಯರಾತ್ರಿ 1.03 ನಿಮಿಷಕ್ಕೆ ಬರುವ ದೃಶ್ಯ ಸ್ಥಳೀಯ ಮನೆಯೊಂದರ ಸಿ ಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇನ್ನೊಂದು ಸಿಸಿ ಕ್ಯಾಮೆರಾದಲ್ಲಿ ಎರಡು ಬೈಕಿನಲ್ಲಿ ಬರುವ ಮೂವರು ವ್ಯಕ್ತಿಗಳು ವಾಪಸ್ ಹೋಗುವಾಗ ಮೂರು ವ್ಯಕ್ತಿಗಳು ಒಂದೇ ಬೈಕಿನಲ್ಲಿ ಹೋಗುವ ದೃಶ್ಯ ದಾಖಲಾಗಿದೆ.

ಯಾರೋ ಗೊತ್ತಿದ್ದವರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ ಮಂಗಳೂರು ಎಸಿಪಿ ಶ್ರೀಕಾಂತ್,ಮುಲ್ಕಿ ಪೊಲೀಸರು, ಶ್ವಾನ ದಳ ,ಬೆರಳಚ್ಚುತಜ್ಞರು,ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೋಪಿನಾಥ ಪಡಂಗ, ಸತೀಶ್ ಕಿಲ್ಪಾಡಿ, ಸಾಮಾಜಿಕ ಕಾರ್ಯಕರ್ತರಾದ ವಿಶುಕುಮಾರ್, ಭೀಮಾ ಶಂಕರ್, ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಶಂಕರ್ ಪಡಂಗ, ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಲ್ಕಿಯ ಗ್ರಾಮೀಣ ಪ್ರದೇಶದ ದೈವಸ್ಥಾನದಲ್ಲಿ ಲಕ್ಷಾಂತರ ರೂ ಮೌಲ್ಯದ ಕಳ್ಳತನ ಸ್ಥಳೀಯರನ್ನು ಭಯಭೀತರನ್ನಾಗಿಸಿದೆ. ಈ ಭಾಗದಲ್ಲಿ ಕಳೆದ ಕೆಲವು ತಿಂಗಳಿನಿಂದ ಪೊಲೀಸರು ರಾತ್ರಿ ಹೊತ್ತು ಸರಿಯಾಗಿ ಗಸ್ತು ಕೂಡ ನಡೆಸುತ್ತಿಲ್ಲ ಇದು ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಅರ್ಚಕ ಕಿಶೋರ್ ನೀಡಿದ ದೂರಿನಂತೆ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.