Saturday, June 14, 2025
HomeUncategorizedಚೆಂಡೆಯಲ್ಲಿ ಪುಳಿಂಚ ಪ್ರಶಸ್ತಿ ಪ್ರದಾನ - ಕೃತಿ ಬಿಡುಗಡೆ

ಚೆಂಡೆಯಲ್ಲಿ ಪುಳಿಂಚ ಪ್ರಶಸ್ತಿ ಪ್ರದಾನ – ಕೃತಿ ಬಿಡುಗಡೆ

ಧರ್ಮ ಪ್ರಸಾರಕ್ಕೆ ಯಕ್ಷಗಾನದ ಕೊಡುಗೆ ಅಮೂಲ್ಯ : ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ‘ಭಾರತದಲ್ಲಿ ಹಿಂದೂವಾಗಿ ಹುಟ್ಟುವುದು ಪುಣ್ಯವಾಗಿದ್ದು, ಧರ್ಮ ಪ್ರಸಾರಕ್ಕೆ ಯಕ್ಷಗಾನ ಅತ್ಯಮೂಲ್ಯ ಕೊಡುಗೆ ನೀಡಿದೆ. ಯಕ್ಷಗಾನಕ್ಕೆ ಪುಳಿಂಚ ರಾಮಯ್ಯ ಶೆಟ್ಟರ ಸೇವೆ ಸ್ಮರಣೀಯವಾಗಿದ್ದು, ಆ ಪರಂಪರೆಯನ್ನು ಪುತ್ರ ಶ್ರೀಧರ ಶೆಟ್ಟಿ ಪುಳಿಂಚ ಮತ್ತವರ ಪತ್ನಿ ಮುಂದುವರಿಸುತ್ತಿರುವುದು ಶ್ಲಾಘನೀಯವಾಗಿದೆ’ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್ ಅವರು ಹೇಳಿದರು.
ಅವರು ಕಲ್ಲಡ್ಕ ಸಮೀಪ ಬಾಳ್ತಿಲ ಗ್ರಾಮದ ಚೆಂಡೆಯಲ್ಲಿ ಶ್ರೀ ಕಲ್ಲುರ್ಟಿ ದೈವಸ್ಥಾನ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಬೆಜ್ಜದಗುತ್ತು ದಿ.ಪುಳಿಂಚ ರಾಮಯ್ಯ ಶೆಟ್ಟಿ ಅವರ ಸ್ಮರಣಾರ್ಥ ಬೊಳ್ನಾಡುಗುತ್ತು ದಿ.ಸರೋಜಿನಿ ರಾಮಯ್ಯ ಶೆಟ್ಟಿ ಪುಳಿಂಚ ವೇದಿಕೆಯಲ್ಲಿ ಮೇ24,ಶನಿವಾರ ನಡೆದ ಪಂಚಮ ತ್ರೈವಾರ್ಷಿಕ ‘ಪುಳಿಂಚ ಪ್ರಶಸ್ತಿ ಪ್ರದಾನ’ , ಮಂಗಳೂರು ಪುಳಿಂಚ ಚಿಟ್ಸ್(ಒಪಿಸಿ) ಪ್ರೈ.ಲಿಮಿಟೆಡ್ ನ ದಶಮ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಹಿಂದೂ ಧರ್ಮದ ನಾಶಕ್ಕೆ ನಿರಂತರವಾಗಿ ಪ್ರಯತ್ನ ನಡೆಯುತ್ತಿದ್ದು, ಪಹಲ್ಗಾಮ್ ಘಟನೆಯು ಅದಕ್ಕೊಂದು ಜ್ವಲಂತ ಉದಾಹರಣೆಯಾಗಿದೆ. ದೇಶಕ್ಕೆ ಒಳಗಿನ ಶತ್ರುಗಳು ಅಪಾಯಕಾರಿಯಾಗಿದ್ದು, ಈ ಕುರಿತು ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.

‘ಚೆಂಡೆ ಕಲ್ಲುರ್ಟಿ’ ಕೃತಿ ಬಿಡುಗಡೆ:
ಸಮಾರಂಭದಲ್ಲಿ ಲೇಖಕ – ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಬರೆದ ‘ಮಹಿಮೆಯ ಮಹಾಮಾತೆ ಚೆಂಡೆ ಕಲ್ಲುರ್ಟಿ’ ಕೃತಿಯನ್ನು ಹೊಸದಿಗಂತ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ. ಎಸ್. ಪ್ರಕಾಶ್ ಬಿಡುಗಡೆಗೊಳಿಸಿದರು. ಅಲ್ಲದೆ ಮಂಗಳೂರಿನ ಪ್ರಸಿದ್ಧ ಜ್ಯೋತಿಷಿ ಮತ್ತು ದೈವಜ್ಞರಾದ ಶಶಿ ಕುಮಾರ್ ಪಂಡಿತ್ ಅವರು ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಶಶಿರಾಜ್ ರಾವ್ ಕಾವೂರು ರಚಿಸಿದ ‘ಚೆಂಡೆದಪ್ಪೆನ ಸುಗಿಪು’ ಕನ್ನಡ – ತುಳು ಭಕ್ತಿಗೀತೆಗಳ ಧ್ವನಿ ಮುದ್ರಿಕೆಯನ್ನು ಬಿಡುಗಡೆಗೊಳಿಸಿದರು.
ಉದ್ಘಾಟಕರಾದ ಕಲ್ಲಡ್ಕ ಪ್ರಭಾಕರ ಭಟ್ ಕೃತಿಕರ್ತರನ್ನು ಕ್ಷೇತ್ರದ ಪರವಾಗಿ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮುಖ್ಯ ಅತಿಥಿಗಳಾಗಿದ್ದರು.

ಪುಳಿಂಚ ಪ್ರಶಸ್ತಿ -2025 ಪ್ರದಾನ:
ಪುಳಿಂಚ ಸೇವಾ ಪ್ರತಿಷ್ಠಾನವು ಕೀರ್ತಿಶೇಷ ಕಲಾವಿದ ಪುಳಿಂಚ ರಾಮಯ್ಯ ಶೆಟ್ಟಿ ಅವರ ಹೆಸರಿನಲ್ಲಿ ತ್ರೈವಾರ್ಷಿಕವಾಗಿ ನೀಡುವ ಪಂಚಮ ಪುಳಿಂಚ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಮತ್ತು ಮಿಜಾರು ತಿಮ್ಮಪ್ಪ ಅವರಿಗೆ ಪ್ರದಾನ ಮಾಡಲಾಯಿತು.
ಕಳೆದ ವರ್ಷ ನಿಧನರಾದ ಯಕ್ಷಗಾನದ ಹಾಸ್ಯ ಕಲಾವಿದ ದಿ.ಜಯರಾಮ ಆಚಾರ್ಯ ಬಂಟ್ವಾಳ ಅವರಿಗೆ ಮರಣೋತ್ತರ ಪುಳಿಂಚ ಪ್ರಶಸ್ತಿ ನೀಡಲಾಯಿತು.ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ. 25,000/- ನಗದು, ಶಾಲು – ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ನೀಡಿ ಗಣ್ಯರು ಸನ್ಮಾನಿಸಿದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು.

   ಚೆಂಡೆ ಕಲ್ಲುರ್ಟಿ ದೈವಸ್ಥಾನದ ಆಡಳಿತದಾರ ಮತ್ತು ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿ ಪ್ರಸ್ತಾವನೆಗೈದರು. ಕಲಾವಿದ ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಸಂಸ್ಮರಣಾ ಭಾಷಣ ಮಾಡಿದರು. ಟ್ರಸ್ಟ್ ಕೋಶಾಧಿಕಾರಿ ಪ್ರತಿಭಾ ಶ್ರೀಧರ ಶೆಟ್ಟಿ ವಂದಿಸಿದರು. ಯಕ್ಷಗಾನ ಅರ್ಥಧಾರಿ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ ಸಹಕರಿಸಿದರು.

ಸಾಂಸ್ಕೃತಿಕ ರಂಜನೆ:
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ‘ಕುರುಬನ ರಾಣಿ’ ಹಾಸ್ಯ ಪ್ರಸಂಗ, ‘ಬಲೆ ತೆಲಿಪುಲೆ’ ಹಾಸ್ಯ ವೈಭವ, ‘ಪುದರ್ ದೀತಿಜಿ’ ತುಳು ನಾಟಕ ಜರಗಿತು. ಬಳಿಕ ಚೆಂಡೆ ಕಲ್ಲುರ್ಟಿ ದೈವದ ಕೋಲ ಸೇವೆ ಮತ್ತು ಹರಕೆಯ ಕೋಲ ನಡೆಯಿತು.

RELATED ARTICLES
- Advertisment -
Google search engine

Most Popular