ಬೆಂಗಳೂರು : 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರ 2026ನೇ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 71 ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಅನ್ನದಾನೀಶ್ವರ ಸ್ವಾಮೀಜಿ, ಲೇಖಕಿ ಡಾ. ಇಂದಿರಾ ಹೆಗ್ಡೆ, ರಾಜ್ಯದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿ ತೆರೇಸಾ ಭಟ್ಟಾಚಾರ್ಯ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಬೆಂಗಳೂರಿನಲ್ಲಿ ಅಕ್ಟೋಬರ್ 30ರಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದರು. 71ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ 71 ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಿವಿಧ ಜಿಲ್ಲೆಗಳ ಶಾಸಕರು, ಸಚಿವರು, ಕ್ಷೇತ್ರ ತಜ್ಞರು ಹಾಗೂ ಸಾರ್ವಜನಿಕರಿಂದ ಬಂದ ಶಿಫಾರಸು ಮತ್ತು ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ 15 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ನವೆಂಬರ್ 1ರಂದು ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಾನಪದ, ಸಂಗೀತ, ಸಾಹಿತ್ಯ, ನೃತ್ಯ, ಚಲನಚಿತ್ರ, ಕಿರುತೆರೆ, ಯಕ್ಷಗಾನ, ಮಾಧ್ಯಮ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆಗಾಗಿ ಐದು ಸಮಿತಿಗಳನ್ನು ರಚಿಸಲಾಗಿತ್ತು. ಸಮಿತಿಗಳ ಶಿಫಾರಸುಗಳನ್ನು ಉನ್ನತ ಮಟ್ಟದ ಸಮಿತಿ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಿತ್ತು ಎಂದು ಸಚಿವರು ವಿವರಿಸಿದರು.
ಕರಾವಳಿಯ ಆರು ಸಾಧಕರಿಗೆ ಗೌರವ
ಈ ಬಾರಿಯ ಪ್ರಶಸ್ತಿ ಪುರಸ್ಕೃತರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆರು ಮಂದಿ ಸಾಧಕರು ಸ್ಥಾನ ಪಡೆದಿರುವುದು ಕರಾವಳಿ ಭಾಗಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ, ಲೇಖಕಿ ಡಾ. ಇಂದಿರಾ ಹೆಗ್ಡೆ, ತುಳು ಹೋರಾಟಗಾರ ಎ.ಸಿ. ಭಂಡಾರಿ, ಯಕ್ಷಗಾನ ಕಲಾವಿದ ಹೇರಂಜಾಲು ಗೋಪಾಲ ಗಾಣಿಗ, ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ರವಿ ಪ್ರವೀಣ್ ನೊರೊನ್ನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಸಾಧನೆಯ ಪರಿಚಯ
ನ್ಯಾಯಾಂಗ ಕ್ಷೇತ್ರ – ಬಿ.ವಿ. ಆಚಾರ್ಯ: ಉಡುಪಿ ಜಿಲ್ಲೆಯ ಬೆಳವು ಗ್ರಾಮದ ಹಿರಿಯ ವಕೀಲ ಹಾಗೂ ನ್ಯಾಯತಜ್ಞ ಬಿ.ವಿ. ಆಚಾರ್ಯ ಅವರು ಕರ್ನಾಟಕದ ಮಾಜಿ ಅಡ್ವಕೇಟ್ ಜನರಲ್ ಆಗಿ ಐದು ಬಾರಿ ಸೇವೆ ಸಲ್ಲಿಸಿದ್ದಾರೆ. 1957ರಲ್ಲಿ ವಕೀಲ ವೃತ್ತಿ ಆರಂಭಿಸಿದ ಅವರು, ಹೈಕೋರ್ಟ್ನ ಹಿರಿಯ ವಕೀಲರಾಗಿ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಹಲವು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.
ಸಮಾಜ ಸೇವೆ – ಎ.ಸಿ. ಭಂಡಾರಿ: ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಎ.ಸಿ. ಭಂಡಾರಿ ಅವರು 1942ರಲ್ಲಿ ಜನಿಸಿದರು. 1969ರಲ್ಲಿ ತುಳು ಕೂಟ ಕುಡ್ಲ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು, ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. 2017ರಿಂದ 2019ರವರೆಗೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನೂ ನಿರ್ವಹಿಸಿದ್ದಾರೆ.
ಸಾಹಿತ್ಯ ಕ್ಷೇತ್ರ – ಡಾ. ಇಂದಿರಾ ಹೆಗ್ಡೆ: ಕಿನ್ನಿಗೋಳಿ ಸಮೀಪದ ಎಳತ್ತೂರು ಗುತ್ತುವಿನ ಡಾ. ಇಂದಿರಾ ಹೆಗ್ಡೆ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕಥೆ, ಕಾದಂಬರಿ, ಸಂಶೋಧನೆ ಹಾಗೂ ಪ್ರವಾಸ ಸಾಹಿತ್ಯ ಸೇರಿದಂತೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತುಳುನಾಡಿನ ಸಂಸ್ಕೃತಿ, ಇತಿಹಾಸ, ಪರಂಪರೆ ಮತ್ತು ಮಹಿಳೆಯರ ಬದುಕಿನ ಕುರಿತು ವಿಶೇಷ ಸಂಶೋಧನೆ ನಡೆಸಿದ್ದಾರೆ.
ಯಕ್ಷಗಾನ ಕ್ಷೇತ್ರ – ಹೇರಂಜಾಲು ಗೋಪಾಲ ಗಾಣಿಗ: ಬೈಂದೂರು ತಾಲೂಕಿನ ನಾಗೂರು ಸಮೀಪದ ಹಿರಿಯ ಭಾಗವತ ಹಾಗೂ ಯಕ್ಷಗುರು ಹೇರಂಜಾಲು ಗೋಪಾಲ ಗಾಣಿಗ ಅವರು ಸುಮಾರು 45 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಾರಣಕಟ್ಟೆ, ಮಂದಾರ್ತಿ, ಸಾಲಿಗ್ರಾಮ, ಕಮಲಶಿಲೆ ಸೇರಿದಂತೆ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಖರದೂಷಣ ಕಾಳಗ, ಚೂಡಾಮಣಿ, ವಾಲಿ ಸುಗ್ರೀವ ಹಾಗೂ ಇಂದ್ರಜಿತು ಮೊದಲಾದ ಪ್ರಸಂಗ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಮಾಧ್ಯಮ ಮತ್ತು ಛಾಯಾಗ್ರಹಣ – ವಿಶ್ವನಾಥ ಸುವರ್ಣ: ಮಂಗಳೂರಿನ ಬಲ್ಲಾಳ್ಬಾಗ್ ಮೂಲದ ವಿಶ್ವನಾಥ ಸುವರ್ಣ ಅವರು ವಿವಿಧ ಪತ್ರಿಕಾ ಸಂಸ್ಥೆಗಳಲ್ಲಿ ಸುಮಾರು 45 ವರ್ಷಗಳ ಕಾಲ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ವಿವಿಧೆಡೆ ಇರುವ 116 ಕೋಟೆಗಳು ಹಾಗೂ ರಕ್ಷಣಾ ಸ್ಮಾರಕಗಳನ್ನು ಗುರುತಿಸಿ ಛಾಯಾಚಿತ್ರಗಳ ಮೂಲಕ ದಾಖಲಿಸಿದ್ದಾರೆ. ‘ಕರುನಾಡಿನ ಕೋಟೆಗಳು’ ಕೃತಿಯ ಮೂಲಕ ರಾಜ್ಯದ ಕೋಟೆಗಳ ಪರಂಪರೆಯನ್ನು ಪರಿಚಯಿಸಿದ್ದಾರೆ.
ಸಂಕೀರ್ಣ ಕ್ಷೇತ್ರ – ರವಿ ಪ್ರವೀಣ್ ನೊರೊನ್ನಾ: ಶಿರ್ವ ಮೂಲದ ರವಿ ಪ್ರವೀಣ್ ನೊರೊನ್ನಾ ಅವರು ಕಳೆದ ಎರಡು ದಶಕಗಳಿಂದ ವಿವಿಧ ಕಾನೂನು ಜಾರಿ ಸಂಸ್ಥೆಗಳಿಗೆ ಉಚಿತ ತಾಂತ್ರಿಕ ಸಲಹೆ ಮತ್ತು ಸಹಕಾರ ನೀಡುತ್ತಿದ್ದಾರೆ. ಕೆಎಸ್ಪಿ, ಸಿಬಿಐ, ಇಡಿ, ಎನ್ಸಿಬಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಿಗೆ ತಾಂತ್ರಿಕ ನೆರವು, ತನಿಖಾಧಿಕಾರಿಗಳಿಗೆ ಸಹಕಾರ ಹಾಗೂ ನ್ಯಾಯಾಲಯಗಳಲ್ಲಿ ತಾಂತ್ರಿಕ ಪರಿಣಿತ ಸಾಕ್ಷ್ಯ ಒದಗಿಸುವ ಸೇವೆ ಸಲ್ಲಿಸುತ್ತಿದ್ದಾರೆ.
ಈ ಬಾರಿ ಒಟ್ಟು 12 ಮಹಿಳೆಯರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ವಿವಿಧ ಸಮುದಾಯಗಳು ಹಾಗೂ ಎಲ್ಲ ಜಿಲ್ಲೆಗಳ ಸಾಧಕರಿಗೂ ಪ್ರಾತಿನಿಧ್ಯ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದರು.
ವಿಷ್ಣುವರ್ಧನ್, ಸರೋಜಾದೇವಿಗೆ ಕರ್ನಾಟಕ ರತ್ನ
ಈ ಬಾರಿಯ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಗೆ ಹಿರಿಯ ನಟರಾದ ಡಾ. ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರು ಆಯ್ಕೆಯಾಗಿದ್ದು, ನವೆಂಬರ್ 19ರಂದು ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.
