
ಸಜೀಪನಡು : ಈ ಬಾರಿಯ ದಸರಾ ಸಂದರ್ಭದಲ್ಲಿಮಾರ್ನೆಮಿ ವೇಷ ಧರಿಸಿ ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಹಣವನ್ನು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಆರ್ಥಿಕ ಸಂಕಷ್ಟದಲ್ಲಿರುವ ವ್ಯಕ್ತಿಗೆ ನೀಡಿ ಮಾನವೀಯತೆ ಮೆರೆದ ಮಕ್ಕಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವೀರಾಂಜನೇಯ ಯುವಕ ಸಂಘ ಕೋಟೆಕಣಿ ವತಿಯಿಂದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತಕಥಾ ಪೂಜೆಯ ಸಂದರ್ಭದಲ್ಲಿ ಈ ಮಕ್ಕಳ ಆದರ್ಶ ಕಾರ್ಯವನ್ನು ಗುರುತಿಸಿ ಗೌರವಿಸಲಾಯಿತು. ಮಕ್ಕಳಿಗೆ ಶಾಲು ಹೊದಿಸಿ, ದೇವಸ್ಥಾನದ ವತಿಯಿಂದ ಶ್ರೀ ದೇವರ ಪ್ರಸಾದ ಹಾಗೂ ಗೌರವಧನ ನೀಡಿ ಪ್ರೋತ್ಸಾಹಿಸಲಾಯಿತು.
ದಸರಾ ಸಂದರ್ಭದಲ್ಲಿ ಮಾರ್ನೆಮಿ ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ, ಸಂಕಷ್ಟದಲ್ಲಿರುವವರ ನೆರವಿಗೆ ನೀಡುವ ಮೂಲಕ ಮಕ್ಕಳು ಸಮಾಜಕ್ಕೆ ಮಾನವೀಯತೆಯ ಮಹತ್ವದ ಸಂದೇಶ ನೀಡಿದ್ದಾರೆ. ಮಕ್ಕಳ ಈ ಉದಾರ ಮನೋಭಾವ ಮತ್ತು ಸಮಾಜಮುಖಿ ಚಿಂತನೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಜಿ. ರಾಮಕೃಷ್ಣ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ. ರಾಧಾಕೃಷ್ಣ ಆಳ್ವ, ಪ್ರಮೋದ್ ಸ್ಥಾನಮನೆ, ಕಿಶನ್ ಸೇಣವ, ಪ್ರದೀಪ್ ಭಂಡಾರಿ, ಯುವಕ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
