ಉಡುಪಿ : ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರೂ ಸಂಬಂಧಿಕರು ಯಾರೂ ಬಾರದ ಹಿನ್ನೆಲೆಯಲ್ಲಿ ಅಪರಿಚಿತ ವೃದ್ಧರೊಬ್ಬರಿಗೆ ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ಪುನರ್ವಸತಿ ಕಲ್ಪಿಸಲಾಯಿತು.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಎಸ್.ಐ ಮುಕ್ತಬಾಯಿ ಸಹಕರಿಸಿದರು. ಹೊಸಬೆಳಕು ಆಶ್ರಮದ ಸಂಚಾಲಕರಾದ ತನುಲಾ ತರುಣ್ ಹಾಗೂ ಗೌರೀಶ್ ಅವರು ದಿಕ್ಕಿಲ್ಲದ ವೃದ್ಧರಿಗೆ ಆಶ್ರಯ ಒದಗಿಸುವ ಮೂಲಕ ಮಾನವೀಯತೆ ಮೆರೆದರು.
ಕಳೆದ ತಿಂಗಳು ಬ್ರಹ್ಮಾವರ ಅಂಚೆ ಕಚೇರಿ ಮುಂಭಾಗದ ಫುಟ್ಪಾತ್ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಮಲಗಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳೀಯ ಆಟೋ ಚಾಲಕರ ನೆರವಿನಿಂದ ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಯ ದಾಖಲಾತಿ ಪ್ರಕ್ರಿಯೆ ವೇಳೆ ವೃದ್ಧರು ತಮ್ಮ ಹೆಸರು ಶೇಖರ ಪೂಜಾರಿ (75) ಎಂದು ತಿಳಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಮನೆಯವರ ಸಂಪರ್ಕವಿಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

