ಉಡುಪಿ: ಆಮಂತ್ರಣ ಸಾಂಸ್ಕೃತಿಕ ಹಾಗೂ ಸಾಹಿತ್ಯ ವೇದಿಕೆ, ಕರ್ನಾಟಕದ ಉಡುಪಿ ಜಿಲ್ಲಾ ವೇದಿಕೆ ಒಂದು ವರ್ಷ ಪೊರೈಸಿದ ಸಂದರ್ಭದಲ್ಲಿ ಅಕ್ಟೋಬರ್ 4, 2026 ರಂದು ಉಡುಪಿಯ ಅಜ್ಜರಕಾಡಿನಲ್ಲಿರುವ ಡಿಜಿಟಲ್ ಗ್ರಂಥಾಲಯದ ಸಂಭಾಗಣದಲ್ಲಿ “ವರ್ಷದ ಹರ್ಷೋತ್ಸವ” ಕಾರ್ಯಕ್ರಮ ಆಚರಿಸಲಾಯಿತು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪುಷ್ಪ ಪ್ರಸಾದ್, ಆಮಂತ್ರಣ ವೇದಿಕೆಯ ಸಂಸ್ಥಾಪಕ ಶ್ರೀ ವಿಜಯ್ ಕುಮಾರ್ ಜೈನ್, ಮುಖ್ಯ ಅತಿಥಿಗಳಾದ ಶ್ರೀ ರವಿ ಕುಮಾರ್ ಗಂಗೊಳ್ಳಿ, ಲೇಖಕರು, ವಕೀಲರು, ಸಂಪಾದಕರು, ವ್ಯವಸ್ಥಾಪಕರು ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಶ್ರೀ ಪ್ರಕಾಶ್ ಕಟಪಾಡಿ, ಲೇಖಕರು, ಗಾಯಕರು ಹಾಗೂ ಪ್ರಜಾವಾಣಿಯ ರಿಪೋರ್ಟರ್, ಆಮಂತ್ರಣ ವೇದಿಕೆಯ ರಾಜ್ಯ ಪ್ರತಿನಿಧಿಗಳಾದ ಶ್ರೀಮತಿ ಆಶಾ ಅಡೂರು ಹಾಗೂ ಶ್ರೀಮತಿ ಭಾರತಿ ಪರ್ಕಳ ಮತ್ತು ಆಮಂತ್ರಣ ದಕ್ಷಿಣ ಕನ್ನಡ ವೇದಿಕೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ವಿಂದ್ಯಾ ಎಸ್.ರೈ ಕಡೇಶಿವಾಲಯ ಉಪಸ್ಥಿತರಿದ್ದರು. ಕುಮಾರಿ ವಿಶ್ರುತಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು ನಂತರ ಅತಿಥಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಶ್ರೀ ವಿಜಯ್ ಕುಮಾರ್ ಜೈನ್ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ರವಿ ಕುಮಾರ್ ಗಂಗೊಳ್ಳಿಯವರು ಮಾತನಾಡಿ ಮಹಿಳೆಯರೇ ಸಕ್ರಿಯರಾಗಿರುವುದರಿಂದ ಈ ವೇದಿಕೆ ಯಶಸ್ವಿಯಾಗಿ ನಡೆಯುತ್ತಿದೆ, ಇನ್ನಷ್ಟು ಎತ್ತರಕ್ಕೆ ಈ ಸಂಸ್ಥೆ ಬೆಳೆಯಲಿ ಎಂದು ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಪ್ರಕಾಶ್ ಕಟಪಾಡಿ ಮಾತನಾಡಿ ವೇದಿಕೆಯ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಿದರು ಹಾಗೂ ಆಮಂತ್ರಣ ವೇದಿಕೆ ನಡೆದು ಬಂದ ರೀತಿಯನ್ನು ಮೆಚ್ಚಿಕೊಂಡರು.
ಆನ್ ಲೈನ್ ನಲ್ಲಿ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ಬಹುಮಾನಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಮೆಚ್ಚುಗೆ ಪಡೆದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಒಟ್ಟು 25 ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.
ನೂತನವಾಗಿ ಆಯ್ಕೆಗೊಂಡ ನಾಲ್ಕು ಜನ ಪದಾಧಿಕಾರಿಗಳು ಉಡುಪಿ ವೇದಿಕೆಯ ನಿರ್ದೇಶಕರಾಗಿ ಪದ ಸ್ವೀಕಾರ ಮಾಡಿದರು.
ಆಮಂತ್ರಣ ವೇದಿಕೆಯ ಬ್ರಹ್ಮಾವರ ತಾಲೂಕಿನ ಅಧ್ಯಕ್ಷೆ ಶ್ರೀಮತಿ ಸುಮಾ ಕಿರಣ್ ಇವರ “ವಿಷಕನ್ಯೆ” ಪುಸ್ತಕ ಬಿಡುಗಡೆ ಮಾಡಲಾಯಿತು. ಉಡುಪಿ ವೇದಿಕೆಯ ನಿರ್ದೇಶಕಿಯಾದ ಶ್ರೀಮತಿ ಶೋಭಾ ದಿನೇಶ್ ಕೃತಿಯನ್ನು ಪರಿಚಯಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಉಡುಪಿ ವೇದಿಕೆಯ ಸದಸ್ಯರು ತಮ್ಮ ಅಧ್ಯಕ್ಷರು ಯಶಸ್ವಿಯಾಗಿ ಒಂದು ವರ್ಷ ಪೊರೈಸಿದ ಸಂತಸದಲ್ಲಿ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಪ್ರಸಾದ್ ಇನರನ್ನು ಸನ್ಮಾನಿಸಿ ಸಂಭ್ರಮಿಸಿದರು. ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಪುಷ್ಪಾ ಪ್ರಸಾದ್ ವರ್ಷಪೂರ್ತಿ ಸಹಕರಿಸಿದ ವೇದಿಕೆಯ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸಿ ಅಭಿನಂದಿಸಿದರು ಹಾಗೂ ಮುಂದಿನ ದಿನಗಳಲ್ಲಿ ವೇದಿಕೆಯಿಂದ ಇನ್ನಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನು ಮಾಡುವ ಇಂಗಿತ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮದ ನಂತರ ನೆರೆದ ಬರಹಗಾರರಿಗೆ ಆಶು ಕವನ ಸ್ಪರ್ಧೆ, ಛಧ್ಮವೇಷ ಸ್ಪರ್ಧೆ, ರಸ ಪ್ರಶ್ನೆ ಸ್ಪರ್ಧೆ ಹಾಗೂ ಮೋಜಿನ ಆಟಗಳನ್ನು ಆಯೋಜನೆ ಮಾಡಲಾಗಿತ್ತು ಹಾಗೆಯೇ ಅಚ್ಚುಕಟ್ಟಾದ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ನಡೆದ ಎಲ್ಲಾ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಉಡುಪಿ ವೇದಿಕೆಯ ನಿರ್ದೇಶಕರಾದ ಶ್ರೀ ಅಲೆವೂರು ಸತೀಶ್ ರಾವ್ ಅತಿಥಿಗಳನ್ನು ಸ್ವಾಗತಿಸಿದರು, ಉಡುಪಿ ವೇದಿಕೆಯ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಧನ್ಯವಾದ ಸಮರ್ಪಿಸಿದರು, ಉಡುಪಿ ವೇದಿಕೆಯ ನಿರ್ದೇಶಕಿ ಶ್ರೀಮತಿ ಅನ್ನಪೂರ್ಣ ಶ್ಯಾನುಭೋಗ್ ಕಾರ್ಯಕ್ರಮ ನಿರೂಪಿಸಿದರು.
ವರದಿ ✍️ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ

