ಮೂಡುಬಿದಿರೆ : ದರೆಗುಡ್ಡೆ ಬಿ.ಸಿ.ಎಂ. (B.C.M.) ಹಾಸ್ಟೆಲ್‌ನಲ್ಲಿ ಕಳೆದ 25 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾದ ಅಡುಗೆ ಸಹಾಯಕ ಸುನಿಲ್ ಬಿ. ಅವರಿಗೆ ಹಾಸ್ಟೆಲ್‌ನ ಹಿರಿಯ ವಿದ್ಯಾರ್ಥಿಗಳ ಬಳಗ ಹಾಗೂ ಊರಿನ ಬಂಧುಗಳ ವತಿಯಿಂದ ಗೌರವ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಸುನಿಲ್ ಬಿ. ಅವರ ಸೇವೆಯನ್ನು ಕೊಂಡಾಡಿದ ಸಮಿತ್ ರಾಜ್ ದರೆಗುಡ್ಡೆ ಅವರು ಅತ್ಯಂತ ವಿವರವಾಗಿ ಹಾಗೂ ಭಾವುಕರಾಗಿ ಮಾತನಾಡಿದರು.
“ಸುನಿಲ್ ಬಿ. ಅವರು ಕೇವಲ ಒಬ್ಬ ಸರ್ಕಾರಿ ಕೆಲಸಗಾರನಾಗಿ ತಮ್ಮ ಕರ್ತವ್ಯಕ್ಕಷ್ಟೇ ಸೀಮಿತರಾಗದೆ, ಹಾಸ್ಟೆಲ್‌ನ ಪ್ರತಿಯೊಂದು ಮಗುವಿನ ಜೀವನವನ್ನು ರೂಪಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಹಾಸ್ಟೆಲ್‌ನಲ್ಲಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತಮ್ಮ ಸ್ವಂತ ಮಗುವಿನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ.
ವಿದ್ಯಾರ್ಥಿಗಳು ಅನಾರೋಗ್ಯಕ್ಕೊಳಗಾದ ಸಂದರ್ಭಗಳಲ್ಲಿ ತಡಮಾಡದೆ, ತಮ್ಮ ಸ್ವಂತ ಸಂಬಳದ ಹಣದಿಂದಲೇ ಆಸ್ಪತ್ರೆಯ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ, ಬಡ ವಿದ್ಯಾರ್ಥಿಗಳ ದಿನನಿತ್ಯದ ಸಣ್ಣಪುಟ್ಟ ಬೇಕು-ಬೇಡಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಪೂರೈಸಿ ಅವರಿಗೆ ನೆರವಾಗುತ್ತಿದ್ದರು.
ವಿಶೇಷವಾಗಿ, ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಕಾಳಜಿಯಿಂದ, ಪ್ರತಿದಿನ ಬೆಳಿಗ್ಗೆ ಬೇಗ ಎಬ್ಬಿಸಿ ಓದಲು ಪ್ರೇರೇಪಿಸುತ್ತಿದ್ದರು. ಕೇವಲ ಹಾಸ್ಟೆಲ್ ಮಕ್ಕಳಿಗೆ ಮಾತ್ರವಲ್ಲದೆ, ಇಡೀ ಊರಿನ ಪ್ರತಿಯೊಬ್ಬರಿಗೂ ಅವರು ಚಿರಪರಿಚಿತರಾಗಿದ್ದಾರೆ. ಕಳೆದ 25 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿರುವ ಸುನಿಲ್ ಅವರು ಅತ್ಯಂತ ಆದರಣೀಯ ಹಾಗೂ ಪ್ರೇರಣೆದಾಯಕ ವ್ಯಕ್ತಿ. ಇಂತಹ ಗುಣವುಳ್ಳ ಅಡುಗೆ ಸಹಾಯಕರು ಮತ್ತೆ ಸಿಗುವುದು ವಿರಳ. ಇಂತಹ ಉತ್ತಮ ವ್ಯಕ್ತಿಯ ಮಾರ್ಗದರ್ಶನದಲ್ಲಿ ಬೆಳೆದ ನಾವೇ ಧನ್ಯರು, ಅವರ ಈ ಸರಳತೆ ನಮಗೆಲ್ಲರಿಗೂ ಸದಾ ಪ್ರೇರಣೆ,” ಎಂದು ಸಮಿತ್ ರಾಜ್ ಧರೆಗುಡ್ಡೆ ಅವರು ಶ್ಲಾಘಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅವರು, “ಸುನಿಲ್ ಅವರು ಯಾವುದೇ ಅಹಂ ಇಲ್ಲದ, ಅಪಾರ ವಿನಯತೆಯ ವ್ಯಕ್ತಿ. ಇಂತಹ ಆತ್ಮೀಯ ವ್ಯಕ್ತಿಯ ನಿವೃತ್ತಿ ನಮಗೆಲ್ಲರಿಗೂ ಬೇಸರ ತಂದಿದ್ದರೂ, ಅವರ ಮುಂದಿನ ವಿಶ್ರಾಂತಿ ಜೀವನ ಸುಖ-ಶಾಂತಿಯಿಂದ ಕೂಡಿರಲಿ” ಎಂದು ಶುಭ ಹಾರೈಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಹಿರಿಯ ವಿದ್ಯಾರ್ಥಿ ಪ್ರದೀಪ್ ಕುಮಾರ್, “ಸುನಿಲ್ ಅಣ್ಣ ನಮಗೆಲ್ಲರಿಗೂ ಕೇವಲ ಅಡುಗೆಯವರಾಗಿರದೆ, ಒಬ್ಬ ಹಿರಿಯ ಸಹೋದರನಂತೆ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡಿದ್ದಾರೆ. ಅವರ ಬದುಕು ನಮಗೆ ದೊಡ್ಡ ಪ್ರೇರಣೆ,” ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಟೆಲ್‌ನ ನಿವೃತ್ತ ವಾರ್ಡನ್ ಆನಂದ ಪೂಜಾರಿ, ಸ್ಥಳೀಯ ಅಂಗನವಾಡಿ ಶಿಕ್ಷಕಿ , ಸಿಬ್ಬಂದಿಗಳಾದ ಪವನ್ ಮತ್ತು ಶ್ರೀನಿವಾಸ್ ಸೇರಿದಂತೆ ಹಾಸ್ಟೆಲ್‌ನ ಹಲವಾರು ಹಿರಿಯ-ಕಿರಿಯ ವಿದ್ಯಾರ್ಥಿಗಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

