ಸುಳ್ಯ : ಎಂಟು ಶತಮಾನಗಳ ಐತಿಹ್ಯ ಹೊಂದಿರುವ ಮೇಲಿನ ಮುಕ್ಕೂರು ತರವಾಡಿನ ಶ್ರೀ ರಕೇಶ್ವರಿ, ಶ್ರೀ ಉಳ್ಳಾಕುಲು ಹಾಗೂ ಶ್ರೀ ಗುಳಿಗ ದೈವಸಾನಿಧ್ಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕ್ಷೇತ್ರದ ಇತಿಹಾಸ ಮತ್ತು ಐತಿಹ್ಯವನ್ನು ಒಳಗೊಂಡ ಮಾಹಿತಿ ಪತ್ರ ಹಾಗೂ ಆಮಂತ್ರಣ ಪತ್ರಿಕೆ ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಸೆ.20ರಂದು ಅನುಜ್ಞಾಕಲಶ ನಡೆಯಲಿದ್ದು, 2027ರ ಜ.9 ಮತ್ತು 10ರಂದು ಪ್ರತಿಷ್ಠಾ ಕಾರ್ಯ ಹಾಗೂ ನೇಮೋತ್ಸವ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ನಳಿನ್ ಕುಮಾರ್ ಕಟೀಲ್ ಅವರನ್ನು ಆಹ್ವಾನಿಸಲಾಯಿತು.
ಮೇಲಿನ ಮುಕ್ಕೂರು ತರವಾಡಿನ ಕುಟುಂಬದ ಹಿರಿಯರಾದ ಎಂ.ಕೆ. ಬಾಲಚಂದ್ರರಾವ್ ಹಾಗೂ ಲಕ್ಷ್ಮೀಶ ಬೈಪಾಡಿತ್ತಾಯ ಅವರ ನೇತೃತ್ವದಲ್ಲಿ ಮಾಹಿತಿ ಪತ್ರ ಮತ್ತು ಅನುಜ್ಞಾಕಲಶದ ಆಮಂತ್ರಣ ಪತ್ರಿಕೆಯನ್ನು ಕಟೀಲ್ ಅವರಿಗೆ ಹಸ್ತಾಂತರಿಸಲಾಯಿತು.
ಅಷ್ಟಮಂಗಲ ಪ್ರಶ್ನಾಚಿಂತನೆಯ ಪ್ರಕಾರ ಮೇಲಿನ ಮುಕ್ಕೂರಿನ ಉತ್ತರ ವಾಯುವ್ಯ ಭಾಗದಲ್ಲಿ ಪೂರ್ವಾಭಿಮುಖವಾಗಿ ದೈವದ ಚಾವಡಿ ನಿರ್ಮಿಸಿ, ಶ್ರೀ ರಕೇಶ್ವರಿ, ಶ್ರೀ ಉಳ್ಳಾಕುಲು ಹಾಗೂ ಶ್ರೀ ಗುಳಿಗ ದೈವಗಳ ಉಪಾಧಿಗಳನ್ನು ಪೀಠದಲ್ಲಿ ಇರಿಸಿ ಆರಾಧನೆ ನಡೆಸಬೇಕೆಂದು ತಿಳಿದುಬಂದಿದೆ.
ದೈವಗಳ ಉತ್ಸವದೊಂದಿಗೆ ಪ್ರತಿವರ್ಷ ಪಂಚಪರ್ವ, ನಿತ್ಯದೀಪ, 12 ಸಂಕ್ರಮಣ, ದೀಪಾವಳಿ, ಯುಗಾದಿ, ಪತ್ತನಾಜೆ, ಚೌತಿ ಹಾಗೂ ನವರಾತ್ರಿ ಸೇರಿದಂತೆ ವಿವಿಧ ಪರ್ವಗಳನ್ನು ಆಚರಿಸುವಂತೆ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ತಿಳಿದುಬಂದಿರುವ ವಿಚಾರಗಳನ್ನು ನಳಿನ್ ಕುಮಾರ್ ಕಟೀಲ್ ಅವರಿಗೆ ವಿವರಿಸಲಾಯಿತು.
ಮೇಲಿನ ಮುಕ್ಕೂರು ದೈವಗಳ ಭಂಡಾರದ ಮನೆಯಾಗಿ ಹಿಂದಿನಿಂದಲೂ ವಿಶೇಷ ಮಹತ್ವವನ್ನು ಹೊಂದಿದೆ. ಹಲವು ತಲೆಮಾರುಗಳಿಂದ ದೈವಾರಾಧನೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ಸ್ಥಳೀಯ ಭಕ್ತರು ಹಾಗೂ ಕುಟುಂಬಸ್ಥರ ಸಹಕಾರದೊಂದಿಗೆ ನಡೆಯುತ್ತಿದೆ.
ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಡೆಯಲಿರುವ ಪ್ರತಿಷ್ಠಾ ಕಾರ್ಯ ಹಾಗೂ ನೇಮೋತ್ಸವವನ್ನು ಯಶಸ್ವಿಗೊಳಿಸಲು ಸಿದ್ಧತೆಗಳು ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
