ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಮಂಗಳೂರಿನವರೆಗೆ ಕರಾವಳಿ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಮುನ್ನೆಚ್ಚರಿಕೆ ನೀಡಿದೆ.
ಸೆ.27ರ ಸಂಜೆ 5.30ರಿಂದ ಸೆ.29ರ ರಾತ್ರಿ 11.30ರವರೆಗೆ ಸಮುದ್ರದಲ್ಲಿ 0.8ರಿಂದ 1.1 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಅಲೆಗಳ ಅವಧಿ 16ರಿಂದ 18 ಸೆಕೆಂಡುಗಳವರೆಗೆ ಇರಲಿದೆ ಎಂದು INCOIS ಅಂದಾಜಿಸಿದೆ.
ಈ ಅವಧಿಯಲ್ಲಿ ಕಡಲ ನೀರು ದಿಢೀರ್ ದಡಕ್ಕೆ ನುಗ್ಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಹಾಗೂ ದೋಣಿ ಚಾಲಕರು ಸಮುದ್ರದಲ್ಲಿ ಸಂಚರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಅಲ್ಲದೆ, ಪ್ರವಾಸಿಗರು ಹಾಗೂ ಸಾರ್ವಜನಿಕರು ಕಡಲತೀರದಲ್ಲಿ ಮುನ್ನೆಚ್ಚರಿಕೆ ವಹಿಸಿ, ಸಮುದ್ರಕ್ಕೆ ಇಳಿಯದಂತೆ ಆಡಳಿತ ಹಾಗೂ ಹವಾಮಾನ ಇಲಾಖೆ ಮನವಿ ಮಾಡಿದೆ.

