ಬಂಟ್ವಾಳ ವೆಂಕಟರಮಣಸ್ವಾಮಿ ಕಾಲೇಜಿನಲ್ಲಿ ಸುರಕ್ಷಿತ ಗರ್ಭಪಾತ ಸೇವೆಗಳ ಕುರಿತು ಮಾಹಿತಿ ಕಾರ್ಯಕ್ರಮ

0
11

ಮಹಿಳೆಯರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಡಾ. ಬಿ.ಎಸ್. ಜಯಲಕ್ಷ್ಮೀ ಸಲಹೆ

ಬಂಟ್ವಾಳ: ಶ್ರೀ ವೆಂಕಟರಮಣಸ್ವಾಮಿ ಮಹಾವಿದ್ಯಾಲಯ, ವಿದ್ಯಾಗಿರಿ, ಬಂಟ್ವಾಳದಲ್ಲಿ ‘ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವೆಗಳ ದಿನಾಚರಣೆ’ ಅಂಗವಾಗಿ ‘ವಸುಂಧರಾ’ ಮಹಿಳಾ ಘಟಕ, ಐ.ಐ.ಸಿ. ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಬಂಟ್ವಾಳದ ಜಂಟಿ ಆಶ್ರಯದಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಬಿ.ಎಸ್. ಜಯಲಕ್ಷ್ಮೀ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯದೊಂದಿಗೆ ದೈಹಿಕ ಹಾಗೂ ಮಾನಸಿಕ ಸ್ವಚ್ಛತೆಯ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕು. ಗರ್ಭಧಾರಣೆಯ ಅವಧಿಯಲ್ಲಿ ಸೂಕ್ತ ಕಾಳಜಿ ಹಾಗೂ ಮುನ್ನೆಚ್ಚರಿಕೆ ವಹಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಅವಿವಾಹಿತ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಈ ಕುರಿತು ಪೂರ್ವಭಾವಿ ಆರೋಗ್ಯ ಮಾಹಿತಿ ಪಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಎದುರಾದಾಗ ಸೂಕ್ತ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಡಿ. ಮಂಚಿ ಮಾತನಾಡಿ, ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಪುರುಷರಿಗಿಂತ ಹಲವು ರೀತಿಯಲ್ಲಿ ವಿಭಿನ್ನವಾಗಿದ್ದು, ಮಹಿಳೆಯರು ಸದಾ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಆರೋಗ್ಯದ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಂತಹ ಮಾಹಿತಿ ಕಾರ್ಯಕ್ರಮಗಳು ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಉಪಯುಕ್ತವಾಗಿವೆ ಎಂದರು.

ಕಾರ್ಯಕ್ರಮದ ಸಂಯೋಜಕಿ ಸಹನಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವಣ್ಣ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದ ಪ್ರಯೋಜನ ಪಡೆದರು.

ಕು. ಪ್ರತಿಕ್ಷಾ ಸ್ವಾಗತಿಸಿದರು. ಕು. ತ್ರಿಶಾಲಿ ಕಾರ್ಯಕ್ರಮ ನಿರ್ವಹಿಸಿದರು. ಕು. ದಿಶಾ ಧನ್ಯವಾದ ಸಮರ್ಪಿಸಿದರು.