ಬೆಂಗಳೂರು, : ವಿಶೇಷ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿರುವ ಮೈಸೂರಿನ ನಾಗಶ್ರೀ ಮತ್ತು ಕಿಶೋರ್ ದಂಪತಿಯ ಪುತ್ರಿ ಕೀರ್ತನಾ ಚಿಕಿತ್ಸೆಗೆ 2.5 ಕೋಟಿ ರೂ ಸಂಗ್ರಹಿಸಿದ್ದು, ತಜ್ಞ ವೈದ್ಯರ ಮೂಲಕ ಸೂಕ್ತ ಚಿಕಿತ್ಸೆ ದೊರಕಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಸತಿ,ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಚಂದ್ರಶೇಖರ ಅಪ್ಪೋಡು ನೇತೃತ್ವದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವ ಉದ್ಘಾಟಿಸಿ, ಕೇಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸ್ವತಃ ನಾನು 25 ಲಕ್ಷ ರೂ ಎರಡು ವರ್ಷದ ಬಾಲಕಿ ಕೀರ್ತನಾ ಚಿಕಿತ್ಸೆಗಾಗಿ ಇಂಡಿಯಾ ಬಿಲ್ಡರ್ಸ್ ಮಾಲೀಕ ಜಿಯಾವುಲ್ಲಾ ಷರೀಫ್ 50 ಲಕ್ಷ ರೂ ನೀಡಿದ್ದಾರೆ. ಸಿ ಎಸ್ ಆರ್ ನಿಧಿಯಡಿ ನೆರವು ನೀಡುವಂತೆ ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕರಾದ ಸುಧಾ ಮೂರ್ತಿ ಅವರನ್ನು ಖುದ್ದಾಗಿ ಭೇಟಿ ಮಾಡಿದ ಪರಿಣಾಮ 50 ಲಕ್ಷ ರೂ ದೊರೆತಿದೆ. ಸೆಂಚುರಿ ಬಿಲ್ಡರ್ಸ್ ನ ರವಿ ಪೈ ಸಹ 50 ಲಕ್ಷ ರೂ ನೀಡುತ್ತಿದ್ಧಾರೆ. ಪ್ರಿಸ್ಟೀಜ್ ಗ್ರೂಪ್ ಸಹ 50 ಲಕ್ಷ ರೂ ನೀಡುತ್ತಿದೆ. ಚಿಕಿತ್ಸೆಗೆ 16 ಕೋಟಿ ರೂ ಬೇಕಾಗಿತ್ತು ಎಂದರು.
ಎರಡು ವರ್ಷದ ಕೀರ್ತನಾಳನ್ನು ನನ್ನ ಸರ್ಕಾರಿ ಕಚೇರಿಯಲ್ಲಿ ಭೇಟಿ ಮಾಡಿ ವಿಚಾರಿಸಿದಾಗ ನನಗೆ ಚಿಕಿತ್ಸೆ ಸಿಗದ್ದರೆ ಸಾಯುತ್ತೇನೆ ಎಂದು ಹೇಳಿತು. ಸಣ್ಣ ಮಗುವಿನ ಮಾತು ಕೇಳಿ ನನ್ನ ಕಣ್ಣಾಲಿಗಳು ತುಂಬಿ ಬಂತು. ತಕ್ಷಣವೇ ಹಣ ಸಂಗ್ರಹಿಸಲು ಮುಂದಾದೆ. ನನ್ನ ಸ್ನೇಹಿತ, ತಜ್ಞ ವೈದ್ಯರ ಮೂಲಕ ಚಿಕಿತ್ಸೆ ದೊರೆಯುತ್ತಿದೆ. ಯಾರಿಗಾದರೂ ಸಹಾಯ ಮಾಡಬೇಕು ಎಂದಾಗ ಸ್ವಾರ್ಥ ಇರಬಾರದು. ಸತ್ತು ಸ್ವರ್ಗ ಸೇರಿದಾಗ ಒಳ್ಳೆಯದಾಗಬೇಕು. ನಾಲ್ಕು ಜನ ಕಂಬಿನಿ ಮಿಡಿಯಬೇಕು. ಅದೇ ಸಾರ್ಥಕ ಬದುಕು ಎಂದು ಹೇಳಿದರು.
ಕೆಂಪೇಗೌಡರು ಇಂಜಿನಿಯರಿಂಗ್, ವಾಸ್ತುಶಿಲ್ಪ ಇಲ್ಲದ ಕಾಲದಲ್ಲಿ ಭವ್ಯ ಬೆಂಗಳೂರು ನಿರ್ಮಾಣಕ್ಕೆ ನೀಲ ನಕ್ಷೆ ರೂಪಿಸಿದ್ದಾರೆ. ಕೆಂಪೇಗೌಡರಿಗೆ ಜಾತಿ ಇಲ್ಲ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿದ ಮಹಾನ್ ನಾಯಕ. ಹೀಗಾಗಿ ನಾವೂ ಕೂಡ ಜಾತಿಯತೆ ಮಾಡಬಾರದು. ನಾನು ಮುಸ್ಲೀಂ ಆಗಿದ್ದರೂ ನಾನು ಭಾರತೀಯ. ಕನ್ನಡಿಗ. ನಂತರ ಮುಸ್ಲೀಂ. ರಾಜಕೀಯಕ್ಕೆ ಬಂದ ನಂತರ ಜಾತಿ ಮಾಡಿದರೆ ಅವರಿಗೆ ಒಳ್ಳೆಯದು ಆಗುವುದಿಲ್ಲ. ಮಕ್ಕಳಿಗೂ ಒಳ್ಳೆಯದು ಆಗುವುದಿಲ್ಲ. ನೀವೆಲ್ಲರೂ ಹಿಂದೂಸ್ತಾನಿಗಳು. ಶಾಂತಿ, ಸೌಹಾರ್ದತೆ ಕರ್ನಾಟಕದಲ್ಲಿ ಮಾತ್ರ ಇದೆ. ಚೆನ್ನಾಗಿ ಓದಬೇಕು. ದೇವರು ಪರಿಹಾರ ನೀಡಲು ಸಾಧ್ಯ ಎಂದು ಹೇಳಿದರು.
ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಮಾತನಾಡಿ, ಜಮೀರ್ ಅಹಮದ್ ಖಾನ್ ಕೆಂಪೇಗೌಡರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿ. ಎಲ್ಲಾ ಜಾತಿ, ಸಮುದಾಯಗಳನ್ನು ಒಗ್ಗೂಡಿಸಿ ಮುನ್ನಡೆಸುತ್ತಿದ್ಧಾರೆ. ಅವರು ಸೋಲಿಲ್ಲದ ಸರದಾರ ಮಾತ್ರವಲ್ಲ. ಅವರು ಬದುಕಿರುವವರೆಗೆ ಗೆಲ್ಲುತ್ತಲೇ ಇರುತ್ತಾರೆ ಎಂದರು.
ಕೆಎಂಡಿಸಿ ಅಧ್ಯಕ್ಷ ಬಿ.ಕೆ. ಅಲ್ಪಾಫ್ ಖಾನ್, ಪಾಲಿಕೆ ಮಾಜಿ ಸದಸ್ಯರಾದ ಅಪ್ಪೋಡು ಚಂದ್ರಶಖರ್, ಕೋಕಿಲಾ ಚಂದ್ರಶೇಖರ್, ಡಿ.ಸಿ. ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜೀವ್ ಚಂದ್ರಶೇಖರ್, ಪಕ್ಷದ ಮುಖಂಡರಾದ ನಾಗರಾಜ್, ಅನ್ವರ್ ಭಾಷ, ಅಮ್ಜದ್ ಖಾನ್, ಸಿ.ಎಂ. ವೆಂಕಟೇಶ್, ಸಿ.ಆರ್. ರವಿ ಪ್ರಸಾದ್, ಜಿ.ಘೋಷ್ ಹಾಗೂ ವಿನಾಯಕ್ ಮತ್ತಿತರರು ಉಪಸ್ಥಿತರಿದ್ದರು.
Home Uncategorized ಅನುವಂಶೀಯ ಕಾಯಿಲೆಯಿಂದ ಬಳಲುತ್ತಿರುವ ಮೈಸೂರಿನ ಕೀರ್ತನಾ ಚಿಕಿತ್ಸೆಗೆ 2.5 ಕೋಟಿ ರೂ ಸಂಗ್ರಹ: ಜಮೀರ್ ಅಹಮದ್...