ಹಬ್ಬದ ಸಂಭ್ರಮಕ್ಕೆ ಸುರಕ್ಷತಾ ಸಲಹೆ

0
8

ಮಂಗಳೂರು: ಹಬ್ಬದ ಸಂಭ್ರಮದಲ್ಲಿ ಆನ್‍ಲೈನ್ ಮತ್ತು ಆಫ್‍ಲೈನ್ ಗ್ರಾಹಕರನ್ನು ಆಕರ್ಷಿಸಲು ವಿವಿಧ ಆಕರ್ಷಕ ರಿಯಾಯಿತಿಗಳು, ಸೀಮಿತ ಅವಧಿಯ ವಿಶೇಷ ಮಾರಾಟ ಕೊಡುಗೆಗಳು ಹಾಗೂ ಕ್ಯಾಶ್‍ಬ್ಯಾಕ್ ಆಫರ್‍ಗಳನ್ನು ನೀಡಲಾಗುತ್ತಿದ್ದು, ಗ್ರಾಹಕರು ತ್ವರಿತ ನಿರ್ಧಾರ ಕೈಗೊಂಡು ಆನ್‍ಲೈನ್ ವಹಿವಾಟು ಮಾಡುವ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) ಸಲಹೆ ಮಾಡಿದೆ.

ಗ್ರಾಹಕರ ವರ್ತನೆಯ ಪ್ರವೃತ್ತಿಗಳನ್ನು ಅರಿತಿರುವ ಸೈಬರ್ ವಂಚಕರು, ಸೋಷಿಯಲ್ ಎಂಜಿನಿಯರಿಂಗ್ ತಂತ್ರಗಳನ್ನು ಬಳಸಿಕೊಂಡು ಅವರನ್ನು ವಂಚನೆಗೆ ಗುರಿಪಡಿಸುತ್ತಾರೆ. ಸೂಕ್ತ ಜಾಗೃತಿ ಮತ್ತು ಕೆಲವು ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಬಳಕೆದಾರರು ತಮ್ಮ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತವಾಗಿ ನಡೆಸುವುದರ ಜೊತೆಗೆ ಯಾವುದೇ ಆತಂಕವಿಲ್ಲದೆ ಹಬ್ಬದ ಸಂಭ್ರಮವನ್ನು ಆನಂದಿಸಬಹುದು ಎಂದು ಹೇಳಿದೆ.

ಅಧಿಕೃತ ಆ್ಯಪ್‍ಗಳು ಮತ್ತು ವೆಬ್‍ಸೈಟ್‍ಗಳಲ್ಲೇ ಶಾಪಿಂಗ್ ಮಾಡುವುದು, ಅಧಿಕೃತ ವೇದಿಕೆಯಲ್ಲೇ ಪಾವತಿಗಳನ್ನು ಪೂರ್ಣಗೊಳಿಸುವುದು, ಉಚಿತ ವೋಚರ್‍ಗಳು ಮತ್ತು ಕ್ಯಾಶ್‍ಬ್ಯಾಕ್ ಆಫರ್‍ಗಳ ಭರವಸೆಗಳ ಬಗ್ಗೆ ಎಚ್ಚರಿಕೆಯಿಂದಿರುವುದು, ಅನಿರೀಕ್ಷಿತ ಓಟಿಪಿ ಬೇಡಿಕೆಗಳನ್ನು ಅಪಾಯದ ಮುನ್ಸೂಚನೆಯಾಗಿ ಪರಿಗಣಿಸುವುದು ಹಾಗೂ ಒತ್ತಡಕ್ಕೆ ಮಣಿದು ಆತುರದ ನಿರ್ಧಾರಗಳನ್ನು ಕೈಗೊಳ್ಳದಿರುವುದು ಉತ್ತಮ ಎಂದು ತಿಳಿಸಿದೆ.

ಸುರಕ್ಷಿತ ಡಿಜಿಟಲ್ ಹಣಕಾಸಿನ ವಹಿವಾಟುಗಳನ್ನು ಖಚಿತಪಡಿಸಿಕೊಳ್ಳಲು ಬಳಕೆದಾರರು ‘ನಿಲ್ಲಿಸಿ, ಯೋಚಿಸಿ, ಕಾರ್ಯನಿರ್ವಹಿಸಿ’ ಎಂಬ ತತ್ವವನ್ನು ಅನುಸರಿಸುವುದು ಅತ್ಯಂತ ಅಗತ್ಯ. ಅನಿರೀಕ್ಷಿತ ಮನವಿಗಳು ಅಥವಾ ಸಂದೇಶಗಳು ಬಂದಾಗ ತಕ್ಷಣ ಪ್ರತಿಕ್ರಿಯಿಸದೆ ನಿಲ್ಲುವುದು, ಲಭ್ಯವಿರುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಯೋಚಿಸುವುದು ಹಾಗೂ ನಂತರ ವಿವೇಚನೆಯಿಂದ ಕಾರ್ಯನಿರ್ವಹಿಸುವುದು ಬಹಳ ಮುಖ್ಯ ಎಂದು ಹೇಳಿದೆ.