
ಬಂಟ್ವಾಳ : ಶಂಭೂರಿನ ದಕ್ಷಿಣ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಜೂನ್ 18 ಗುರುವಾರ ಸಂಜೆ “ಸಾಯಿ ಭಕ್ತಿ ಸುಧೆ” ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ಅರ್ಚಕರಾದ ಕೇಶವ ಶಾಂತಿ ಹಾಗೂ ಮಂದಿರದ ಆಡಳಿತ ಮುಖ್ಯಸ್ಥರಾದ ಸುರಜ್ ಸಾಯಿ ಅವರ ಮಾರ್ಗದರ್ಶನದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಭಜನಾ ತಂಡದ ಸದಸ್ಯರು ಮಂದಿರದ ಪರಿಸರದಲ್ಲಿ ಸಂಪಿಗೆ ಗಿಡಗಳನ್ನು ನೆಡುವುದರ ಮೂಲಕ “ಯುವ ವೃಕ್ಷೋತ್ಸವ” ಕಾರ್ಯಕ್ರಮವನ್ನು ಆಚರಿಸಿದರು. ಪರಿಸರ ಸಂರಕ್ಷಣೆ ಮತ್ತು ಆಧ್ಯಾತ್ಮಿಕತೆಯ ಸುಂದರ ಸಮನ್ವಯವನ್ನು ಸಾರಿದ ಈ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಬಳಿಕ “ಭಜನೆಯ ಭಕ್ತಿಯಲ್ಲಿ ಒಂದಾಗೋಣ, ಭಕ್ತಿಯ ಬೆಳಕಿನಲ್ಲಿ ಬದುಕನ್ನು ಸಾರ್ಥಕಗೊಳಿಸೋಣ” ಎಂಬ ಮಹೋದ್ದೇಶದೊಂದಿಗೆ “ಸಾಯಿ ಭಕ್ತಿ ಸುಧೆ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಭಕ್ತಿ ಸುಧೆಯಲ್ಲಿ ಭಕ್ತರು ಸಾಯಿ ನಾಮಸ್ಮರಣೆಯಲ್ಲಿ ತಲ್ಲೀನರಾಗಿ, ಭಜನೆಗಳ ಮೂಲಕ ಸಾಯಿಬಾಬರನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದರು. ಮಂದಿರದ ವಾತಾವರಣ ಭಕ್ತಿಯ ಅಲೆಗಳಿಂದ ತುಂಬಿ ತುಳುಕುತ್ತಿದ್ದು, ಭಜನೆಯ ನಾದವು ಎಲ್ಲರ ಮನಸ್ಸಿಗೆ ಆಧ್ಯಾತ್ಮಿಕ ಶಾಂತಿ, ನೆಮ್ಮದಿ ಹಾಗೂ ದೈವಿಕ ಅನುಭವವನ್ನು ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕ ಕೇಶವ ಶಾಂತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು ವಿವಿಧ ಘಟಕಗಳ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವುದನ್ನು ಶ್ಲಾಘಿಸಿದರು. “ವಿದ್ಯೆ – ಉದ್ಯೋಗ – ಸಂಪರ್ಕ” ಎಂಬ ಧ್ಯೇಯವಾಕ್ಯದೊಂದಿಗೆ ಯುವವಾಹಿನಿ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಹಾಗೂ ಮಾನವೀಯ ಸೇವೆಗಳನ್ನು ಮಾಡುವ ಶಕ್ತಿ ಮತ್ತು ಆಶೀರ್ವಾದವನ್ನು ಶ್ರೀ ಸಾಯಿನಾಥರು ನೀಡಲಿ ಎಂದು ಹಾರೈಸಿದರು.
ಭಕ್ತಿ, ಸೇವೆ ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಯುವವಾಹಿನಿಯ ಪ್ರತಿಯೊಂದು ಕಾರ್ಯಕ್ಕೂ ಶ್ರೀ ಸಾಯಿಬಾಬರ ಅನುಗ್ರಹ ಮತ್ತು ಮಾರ್ಗದರ್ಶನ ಸದಾ ಇದೆ ಎಂಬ ಭಾವನೆ ಕಾರ್ಯಕ್ರಮದಾದ್ಯಂತ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಕೊಡಾಜೆ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಉಪಾಧ್ಯಕ್ಷರಾದ ಸತೀಶ್ ಕೊಪ್ಪರಿಗೆ, ಕೋಶಾಧಿಕಾರಿ ತ್ರಿವೇಣಿ ರಮೇಶ್, ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ರಮೇಶ್ ಪೂಜಾರಿ ಮುಜಲ, ಜಯಂತ ಬರಿಮಾರು, ನಾಗೇಶ್ ಪೂಜಾರಿ ಕೊಂಕಣಕೊಡಿ, ಪದಾಧಿಕಾರಿಗಳು, ಸದಸ್ಯರು ಯುವವಾಹಿನಿಯ ಭಜನಾ ತಂಡದ ಸದಸ್ಯರು ಉಪಸ್ಥಿತರಿದ್ದರು.

