ದೇವಾಲಯದ ಆವರಣದಲ್ಲಿ ‘ಸಮಾಧಿ ಪೂಜೆ’? ಭಾರಿ ಪ್ರತಿಭಟನೆ

0
6

ಮಡಿಕೇರಿ : ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮದ ಗದ್ದಿಗೆಬೆಟ್ಟ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾಧಿ ಮಾದರಿಯ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳೊಂದಿಗೆ ಸೇರಿ ದೇವಾಲಯದ ಎದುರು ಪ್ರತಿಭಟನೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ದೇವಾಲಯದ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ, ಭಾನುವಾರ ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಆಗಮಿಸಿದಾಗ ಹೂಗಳಿಂದ ಅಲಂಕರಿಸಲಾದ ಸಮಾಧಿ ಮಾದರಿಯ ರಚನೆ ದೇವಾಲಯದ ಆವರಣದಲ್ಲಿ ಕಂಡುಬಂದಿದೆ. ಈ ಸಂಬಂಧ ಅನುಮಾನ ವ್ಯಕ್ತಪಡಿಸಿದ ಆಡಳಿತ ಮಂಡಳಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಹಾಗೂ ಕೋಮು ಸೌಹಾರ್ದ ಕದಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಆರೋಪಿಸಿದೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ವ್ಯಕ್ತಿಗಳ ಚಲನವಲನ ಸೆರೆಯಾಗಿದ್ದು, ಆ ದೃಶ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ.

ಘಟನೆಯ ವಿರುದ್ಧ ಸೋಮವಾರ ಗ್ರಾಮಸ್ಥರು, ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಬೆಂಬಲದೊಂದಿಗೆ ದೇವಾಲಯದ ಎದುರು ಭಾರಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ, ಆರೋಪಿಗಳನ್ನು ಇನ್ನೂ ಬಂಧಿಸದಿರುವುದಕ್ಕೆ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ನಡೆದ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿದ್ದು, ಅವರ ವಿರುದ್ಧವೂ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯ ವೇಳೆ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿದ್ದ ಸಮಾಧಿ ಮಾದರಿಯ ರಚನೆಯನ್ನು ಪ್ರತಿಭಟನಾಕಾರರು ತೆರವುಗೊಳಿಸಿದರು. ಅದರೊಳಗೆ ಯಾವುದೇ ವಸ್ತು ಇರಲಿಲ್ಲ ಎಂದು ಅವರು ತಿಳಿಸಿದ್ದು, ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವಿಸಲಾಗಿದೆ ಎಂಬ ಆರೋಪವನ್ನೂ ಕೆಲ ಪ್ರತಿಭಟನಾಕಾರರು ಮಾಡಿದರು. ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಆರ್‌ಎಫ್‌ಒ ನವೀನ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರಾಬಿನ್ ದೇವಯ್ಯ ಸೇರಿದಂತೆ ಹಲವು ಹಿಂದೂ ಸಂಘಟನೆಗಳ ಮುಖಂಡರು ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.