ಮಂಗಳೂರು : ಮಳೆಯಿಂದಾಗಿ ಘೋಷಿಸಲಾಗಿದ್ದ ರಜಾ ದಿನಗಳನ್ನು ಸರಿದೂಗಿಸುವ ಉದ್ದೇಶದಿಂದ, ಮುಂಬರುವ ದಸರಾ ರಜೆಯ ಅವಧಿಯಲ್ಲಿ ಕೆಲವು ಷರತ್ತುಗಳಿಗೆ ಒಳಪಟ್ಟು ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಸ್ಥರು ಹಾಗೂ ಬ್ಲಾಕ್ ಶಿಕ್ಷಣಾಧಿಕಾರಿಗಳು ಸಲ್ಲಿಸಿದ ಮನವಿಗಳನ್ನು ಪರಿಗಣಿಸಿರುವ ಜಿಲ್ಲಾ ಉಪನಿರ್ದೇಶಕರ ಕಚೇರಿ, ಅಕ್ಟೋಬರ್ 3ರಿಂದ 7ರವರೆಗೆ ಅಗತ್ಯವಿರುವ ಶಾಲೆಗಳಲ್ಲಿ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಿದೆ.
ಅಕ್ಟೋಬರ್ 3ರಿಂದ ತರಗತಿಗಳನ್ನು ನಡೆಸುವ ಶಾಲೆಗಳು, ಮಳೆ ರಜೆಯಿಂದ ಉಂಟಾದ ಬೋಧನಾ ದಿನಗಳ ಕೊರತೆಯನ್ನು ಸರಿದೂಗಿಸುವ ಕ್ರಮ ಕೈಗೊಳ್ಳಬೇಕು. ಶನಿವಾರ ಮಧ್ಯಾಹ್ನದ ಬಳಿಕ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕವೂ ರಜೆಯನ್ನು ಸರಿದೂಗಿಸಬಹುದು ಎಂದು ಸೂಚಿಸಲಾಗಿದೆ.
ಆದರೆ, ವಿಶೇಷ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಹಾಜರುಪಡಿಸುವ ಮೊದಲು ಪೋಷಕರಿಂದ ಲಿಖಿತ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದ್ದು, ಪಡೆದ ಒಪ್ಪಿಗೆ ಪತ್ರಗಳನ್ನು ಶಾಲೆಯ ದಾಖಲೆಯಲ್ಲಿ ಸಂರಕ್ಷಿಸಬೇಕು ಎಂದು ಇಲಾಖೆ ತಿಳಿಸಿದೆ.
ಇದರೊಂದಿಗೆ, ಶಾಲೆಗಳು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಸಭೆ ನಡೆಸಿ, ವಿಶೇಷ ತರಗತಿಗಳನ್ನು ನಡೆಸುವ ಕುರಿತು ಕೈಗೊಂಡ ನಿರ್ಧಾರದ ನಡಾವಳಿಯನ್ನು ದಾಖಲಿಸಬೇಕು. ಮುಖ್ಯೋಪಾಧ್ಯಾಯರು ಹಾಗೂ ಸಹಾಯಕ ಶಿಕ್ಷಕರು ಈ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಲಾಗಿದೆ.
ವಿಶೇಷ ತರಗತಿಗಳ ವೇಳಾಪಟ್ಟಿ, ಕೈಗೊಂಡ ಕ್ರಮಗಳು ಹಾಗೂ ತರಗತಿಗಳ ವಿವರಗಳನ್ನು ಆಯಾ ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವಂತೆ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.

