ಚಿಕ್ಕಮಗಳೂರು : ರಾತ್ರಿ ವೇಳೆ ಬೇಟೆಗೆ ತೆರಳಿದ್ದ ಸಂದರ್ಭದಲ್ಲಿ ಗುಂಡು ಮಿಸ್‌ಫೈರ್ ಆಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೊಪ್ಪ ತಾಲೂಕಿನ ಕಾಡಂಚಿನ ಗ್ರಾಮವಾದ ಕಡೇಮನೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಗ್ರಾಮದ ಚೇತನ್ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 30ರ ರಾತ್ರಿ ಚೇತನ್ ಸೇರಿದಂತೆ ಏಳು ಮಂದಿ ಸ್ನೇಹಿತರು ಬೇಟೆಗೆಂದು ಅರಣ್ಯ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ಬೇಟೆಯ ವೇಳೆ ಪ್ರಾಣಿಯೊಂದರ ಮೇಲೆ ಗುಂಡು ಹಾರಿಸುವ ಸಂದರ್ಭದಲ್ಲಿ ಗುಂಡು ಮಿಸ್‌ಫೈರ್ ಆಗಿ ಚೇತನ್‌ಗೆ ತಗುಲಿದೆ ಎಂದು ತಿಳಿದುಬಂದಿದೆ.
ಹೊಟ್ಟೆ ಭಾಗಕ್ಕೆ ಗುಂಡು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡ ಚೇತನ್ ಅವರನ್ನು ಜೊತೆಗಿದ್ದವರು ತಕ್ಷಣ ಜಯಪುರ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚೇತನ್ ಅವರನ್ನು ಆಸ್ಪತ್ರೆಗೆ ಕರೆತಂದಿದ್ದ ಮೂವರು ಯುವಕರನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗುಂಡು ಹಾರಿಸಿದರೆಂದು ಹೇಳಲಾಗಿರುವ ಉಳಿದ ಮೂವರು ಸ್ಥಳದಿಂದ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಜಯಪುರ ಆಸ್ಪತ್ರೆಯ ಮುಂಭಾಗ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಕರಣದ ತನಿಖೆ ಮುಂದುವರಿದಿದ್ದು, ಗುಂಡು ಉದ್ದೇಶಪೂರ್ವಕವಾಗಿ ಹಾರಿಸಲಾಗಿತ್ತೇ ಅಥವಾ ಆಕಸ್ಮಿಕವಾಗಿ ಮಿಸ್‌ಫೈರ್ ಆಗಿತ್ತೇ ಎಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

