ಉಡುಪಿ : ಜಿಲ್ಲೆಯ ಕುಂದಾಪುರ ಯೋಜನಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ (ಎಂ.ಆರ್.ಡಬ್ಲ್ಯೂ) ಕಾರ್ಯವೈಖರಿ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ಸಲ್ಲಿಸಲಾದ ದೂರು ಅರ್ಜಿಯ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸಾರ್ವಜನಿಕರಿಂದ ಸಲ್ಲಿಸಲಾದ ದೂರು ಅರ್ಜಿಯಲ್ಲಿ, ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿ.ಆರ್.ಡಬ್ಲ್ಯೂ) ಮೇಲೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ದೂರು ಪ್ರತಿಯನ್ನು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಗೌರವಾಧ್ಯಕ್ಷರಿಗೂ ರವಾನಿಸಲಾಗಿದೆ.
ದೂರು ಪ್ರಕಾರ, ಎಂ.ಆರ್.ಡಬ್ಲ್ಯೂ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸದೆ, ವಿ.ಆರ್.ಡಬ್ಲ್ಯೂರವರನ್ನು ಕಚೇರಿಯಲ್ಲಿ ಅಕ್ರಮವಾಗಿ ಕರ್ತವ್ಯಕ್ಕೆ ನಿಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಕ್ಷೇತ್ರ ಮಟ್ಟದ ಕಾರ್ಯಗಳು ಅಸ್ತವ್ಯಸ್ತವಾಗುತ್ತಿದ್ದು, ಪುನರ್ವಸತಿ ಸೇವೆಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಹೇಳಲಾಗಿದೆ.
ಇದೇ ವೇಳೆ, ಪ್ರತೀ ತಿಂಗಳ ಮಾಸಿಕ ಸಭೆಗಳಲ್ಲಿ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವಿ.ಆರ್.ಡಬ್ಲ್ಯೂರಿಂದ ಹಣ ವಸೂಲಿ ಮಾಡಲಾಗುತ್ತಿದ್ದು, ಅದರ ಕುರಿತು ಯಾವುದೇ ಪಾವತಿ ರಶೀದಿ ನೀಡಲಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ವಿಚಾರವನ್ನು ಪ್ರಶ್ನಿಸುವವರನ್ನು ಗುರಿಯಾಗಿಸಿ ದ್ವೇಷ ಸಾಧನೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಈಗಾಗಲೇ ವಿವರಣೆ ನೀಡುವಂತೆ ಸೂಚನೆ ನೀಡಿದ್ದರೂ, ಸುಮಾರು 55 ದಿನಗಳು ಕಳೆದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.
ದೂರುದಾರರು, ವಿ.ಆರ್.ಡಬ್ಲ್ಯೂರವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮುಕ್ತವಾಗಿ ಹೇಳಿಕೆ ದಾಖಲಿಸಬೇಕು ಹಾಗೂ ಕುಂದಾಪುರ ಎಂ.ಆರ್.ಡಬ್ಲ್ಯೂ ಕಚೇರಿಯ ಕಾರ್ಯವೈಖರಿಯ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಆರೋಪಗಳು ಸತ್ಯವಾಗಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
