ಪುತ್ತೂರು : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೊಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಲಾ ಚಕಲಬ್ಬಿ ಅವರು ತೀರ್ಪು ನೀಡಿದ್ದಾರೆ.
ಶಿಕ್ಷೆಗೆ ಗುರಿಯಾದ ಆರೋಪಿಯನ್ನು ದಿ. ಕುಂಞಪ್ಪ ಬ್ಯಾರಿ ಅವರ ಪುತ್ರ ಅಬ್ದುಲ್ಲಾ ಎಂದು ಗುರುತಿಸಲಾಗಿದೆ.
2020ರ ಫೆಬ್ರವರಿ 14ರಂದು ಬೆಳಗ್ಗೆ 10 ವರ್ಷದ ಬಾಲಕಿ ತನ್ನ ತಾಯಿಯ ಸೂಚನೆಯಂತೆ ಎಳನೀರು ಖರೀದಿಸಲು ಆರೋಪಿಯ ಅಂಗಡಿಗೆ ತೆರಳಿದ್ದಳು. ಈ ವೇಳೆ ಚಿಲ್ಲರೆ ನೀಡುವುದಾಗಿ ಹೇಳಿ ಬಾಲಕಿಯನ್ನು ಅಂಗಡಿಯೊಳಗೆ ಕರೆದುಕೊಂಡು ಹೋಗಿ, ಜ್ಯೂಸ್ ಹಾಗೂ ತಿನ್ನಲು ಏನಾದರೂ ಬೇಕೇ ಎಂದು ಪುಸಲಾಯಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಬಾಲಕಿ ವಿರೋಧ ವ್ಯಕ್ತಪಡಿಸಿ ಹೊರಬರಲು ಮುಂದಾದಾಗ ಆರೋಪಿ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಈ ವಿಚಾರವನ್ನು ಯಾರಿಗೂ ತಿಳಿಸಬಾರದೆಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಘಟನೆ ಕುರಿತು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸುಳ್ಯದ ಅಂದಿನ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯ ವೇಳೆ ಅಭಿಯೋಗವು ಒಟ್ಟು 16 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತು. ಅಭಿಯೋಗ ಹಾಗೂ ಆರೋಪಿತನ ಪರ ವಾದವನ್ನು ಆಲಿಸಿದ ನ್ಯಾಯಾಲಯವು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಪೊಕ್ಸೋ ಕಾಯ್ದೆಯ ಕಲಂ 10ರ ಅಡಿಯಲ್ಲಿ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿದೆ.
ದಂಡದ ಮೊತ್ತದಲ್ಲಿ ₹20 ಸಾವಿರವನ್ನು ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ದಂಡ ಪ್ರಕ್ರಿಯಾ ಸಂಹಿತೆಯ ಕಲಂ 357ಎ ಹಾಗೂ ಪೊಕ್ಸೋ ಕಾಯ್ದೆಯ ಕಲಂ 33(8) ಮತ್ತು ನಿಯಮ 9ರ ಅನ್ವಯ ಬಾಲಕಿಗೆ ₹1.50 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಸರ್ಕಾರದ ಪರವಾಗಿ ಪೊಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ಅವರು ವಾದಿಸಿದ್ದರು.

