ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಅ.11ರಿಂದ ಶರನ್ನವರಾತ್ರಿ ಮಹೋತ್ಸವ

0
7

ಕುಂಜಾರುಗಿರಿ : ಇಲ್ಲಿನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವರ್ಷಾವಧಿ ಶರನ್ನವರಾತ್ರಿ ಮಹೋತ್ಸವವು ಅ.11ರಿಂದ ಅ.20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ.11ರಂದು ಆಶ್ವಯುಜ ಶುದ್ಧ ಪ್ರತಿಪದೆಯಿಂದ ಆರಂಭಗೊಳ್ಳುವ ನವರಾತ್ರಿ ಮಹೋತ್ಸವವು ಅ.20ರಂದು ಮಹಾನವಮಿ ದಿನದ ಚಂಡಿಕಾಯಾಗ ಹಾಗೂ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಳ್ಳಲಿದೆ. ಪ್ರತಿದಿನ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಉಷಃಕಾಲ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾಪೂಜೆ ನಡೆಯಲಿದ್ದು, ಸಂಜೆ ರಾತ್ರಿ ಪೂಜೆ, ದೀವಟಿಗೆ ಸೇವೆ, ಕಲ್ಪೋಕ್ತ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಅ.12ರಂದು ಲಕ್ಷ ಪುಷ್ಪಾರ್ಚನೆ, ಅ.15ರಂದು ಶ್ರೀಲಲಿತಾ ಪಂಚಮಿ ಅಂಗವಾಗಿ ಸಾರ್ವಜನಿಕ ವಿಶೇಷ ಹೂವಿನ ಅಲಂಕಾರ ಸೇವೆ ನಡೆಯಲಿದೆ. ಅ.19ರ ರಾತ್ರಿ 8ರಿಂದ ಅ.20ರ ರಾತ್ರಿ 8ರವರೆಗೆ ಅಹೋರಾತ್ರಿ ಭಜನೆ ಆಯೋಜಿಸಲಾಗಿದೆ. ಅ.21ರಂದು ವಿಜಯದಶಮಿ ಆಚರಣೆ ನಡೆಯಲಿದೆ.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ನವರಾತ್ರಿ ಪ್ರಯುಕ್ತ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.11ರಂದು ಸಂಗೀತ ವಿದುಷಿ ಶ್ರೀಮತಿ ಶ್ರೀಮತಿ ಭಟ್ ಮತ್ತು ಶಿಷ್ಯ ಬಳಗ ಕುಂಜಾರುಗಿರಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅ.12ರಂದು ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

ಅ.13ರಂದು ಗಿರಿಬಳಗ ಕುಂಜಾರುಗಿರಿ ವತಿಯಿಂದ ಯಕ್ಷಗಾನ ಬಯಲಾಟ, ಅ.14ರಂದು ನಾಟ್ಯ ವಿದುಷಿ ಅನನ್ಯ ವಿಠಲ ಭಟ್ ಮತ್ತು ಶಿಷ್ಯ ಬಳಗದಿಂದ ಭರತನಾಟ್ಯ, ಅ.15ರಂದು ನಾಟ್ಯ ವಿದುಷಿ ಶ್ರೀಮತಿ ಸುಮಂಗಲ ರತ್ನಾಕರ ಹಾಗೂ ಮಂಗಳೂರು ಬಳಗದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಅ.16ರಂದು ಕಾರ್ಕಳದ ವೈ. ಅನಂತ ಪದ್ಮನಾಭ ಭಟ್ ಅವರಿಂದ ಹರಿಕಥೆ-ಸತ್ಸಂಗ, ಅ.17ರಂದು ಶ್ರೀ ಅದಮಾರು ಮಠದ ಪೂರ್ಣಪ್ರಜ್ಞ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ, ಅ.18ರಂದು ನಾಟ್ಯ ವಿದುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಅವರ ನೃತ್ಯ ಸುಧಾ ತಂಡದಿಂದ ನೃತ್ಯಾರ್ಚನೆ ನಡೆಯಲಿದೆ.

ಅ.19ರಂದು ಗಿರಿಬಳಗ ಕುಂಜಾರುಗಿರಿಯ ಸದಸ್ಯರಿಂದ ತಾಳಮದ್ದಲೆ ಹಾಗೂ ಅ.20ರಂದು ಬೆಂಗಳೂರಿನ ವಿದುಷಿ ಕುಮಾರಿ ಶ್ರೀ ಕೃಪ ಕೆ. ಮತ್ತು ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ನವರಾತ್ರಿ ಅವಧಿಯಲ್ಲಿ ಪ್ರತಿದಿನ ರಾತ್ರಿ ಕಲ್ಪೋಕ್ತ ಪೂಜೆ ಹಾಗೂ ವಿಶೇಷ ನೈವೇದ್ಯ ಸೇವೆ ನಡೆಯಲಿದ್ದು, ಮಹಾನವಮಿ ದಿನ ಚಂಡಿಕಾಯಾಗ ಸೇವೆ ನೆರವೇರಲಿದೆ. ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳಲು ಆಸಕ್ತ ಭಕ್ತಾದಿಗಳು ದೇವಸ್ಥಾನದ ಸೇವಾ ಕಚೇರಿಯನ್ನು ಸಂಪರ್ಕಿಸುವಂತೆ ಆಡಳಿತ ಮಂಡಳಿ ತಿಳಿಸಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದುರ್ಗಾದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಲಾಗಿದೆ.