ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಯಲ್ಲಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2025–26ನೇ ಸಾಲಿಗೆ ಸಂಬಂಧಿಸಿದಂತೆ ಮರುಜಾರಿಗೊಳಿಸಲಾಗಿದ್ದು, ಈಗಾಗಲೇ ನೋಂದಾಯಿಸಿಕೊಂಡಿರುವ ಸದಸ್ಯರು ನವೀಕರಣ ಮಾಡಿಕೊಳ್ಳಬಹುದಾಗಿದೆ. ಜೊತೆಗೆ, ಈವರೆಗೆ ನೋಂದಾಯಿಸಿಕೊಳ್ಳದ ಸದಸ್ಯರಿಗೆ ಹೊಸ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ.
ಯೋಜನೆಯಡಿ ಫಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ ರೂ.5 ಲಕ್ಷದವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಲಭ್ಯವಿರುತ್ತದೆ. 2025–26ನೇ ಸಾಲಿಗೆ ಸಂಬಂಧಿಸಿದಂತೆ ಚಿಕಿತ್ಸಾ ಅವಧಿಯನ್ನು 01-04-2026ರಿಂದ 31-03-2027ರವರೆಗೆ ನಿಗದಿಪಡಿಸಲಾಗಿದ್ದು, ನೋಂದಣಿ ಪ್ರಕ್ರಿಯೆ 2026ರ ಜನವರಿ 3ರಿಂದ ಮಾರ್ಚ್ ತಿಂಗಳ ಅಂತ್ಯದವರೆಗೆ ನಡೆಯಲಿದೆ.
ಯೋಜನೆಯಲ್ಲಿ ಸೇರಲು ಇಚ್ಛಿಸುವ ಸಹಕಾರ ಸಂಘಗಳ ಸದಸ್ಯರು ಆಧಾರ್ ಕಾರ್ಡ್, ಪಡಿತರ ಚೀಟಿ ಜೆರಾಕ್ಸ್ ಪ್ರತಿ ಹಾಗೂ ಭಾವಚಿತ್ರದೊಂದಿಗೆ ತಮ್ಮ ಸಂಘದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಒಂದು ಸಹಕಾರಿ ಸಂಘದಲ್ಲಿ ಕನಿಷ್ಠ ಒಂದು ತಿಂಗಳು ಸದಸ್ಯತ್ವ ಪೂರ್ಣಗೊಂಡಿದ್ದ ರೈತ ಸದಸ್ಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಗ್ರಾಮೀಣ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಕುಟುಂಬದ ನಾಲ್ಕು ಸದಸ್ಯರ ತನಕ ರೂ.500 ಶುಲ್ಕ ನಿಗದಿಪಡಿಸಲಾಗಿದ್ದು, ನಾಲ್ಕು ಸದಸ್ಯರ ನಂತರ ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂ.100 ಪಾವತಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಜಾತಿ ಪ್ರಮಾಣ ಪತ್ರ ಸಲ್ಲಿಸಿದಲ್ಲಿ ಉಚಿತವಾಗಿ ನೋಂದಣಿ ಹಾಗೂ ನವೀಕರಣ ಸೌಲಭ್ಯ ಪಡೆಯಬಹುದು.
ಆಸಕ್ತ ರೈತ ಸದಸ್ಯರು ಹಾಗೂ ಕುಟುಂಬದವರು ಸಮೀಪದ ಪ್ರಾಥಮಿಕ ಸಹಕಾರ ಸಂಘಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
