ಸಿದ್ಧಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ಧಾಪುರ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.) ತನ್ನ ಸ್ವರ್ಣಮಹೋತ್ಸವವನ್ನು ಆಗಸ್ಟ್ 1ರಂದು ವೈಭವದಿಂದ ಆಚರಿಸಲು ಸಜ್ಜಾಗಿದೆ.
1975ರಲ್ಲಿ ಸ್ಥಾಪನೆಯಾದ ಸಂಘವು 50 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸ್ವರ್ಣಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಅಂಗವಾಗಿ ‘ಅಕ್ಕರೆಯ ಕರೆಯೋಲೆ’ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಸ್ವರ್ಣಮಹೋತ್ಸವ ಕಾರ್ಯಕ್ರಮವು ಆಗಸ್ಟ್ 1, 2026ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದ್ದು, ಸಂಘದ ಸದಸ್ಯರು, ಹಾಲು ಉತ್ಪಾದಕರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಗಣ್ಯರ ಸನ್ಮಾನ, ಸಾಧಕರಿಗೆ ಗೌರವ, ಸಭಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಂಘದ ಐವತ್ತು ವರ್ಷಗಳ ಸೇವೆಯನ್ನು ಸ್ಮರಿಸುವ ಈ ಸ್ವರ್ಣಮಹೋತ್ಸವವು ಸದಸ್ಯರು ಹಾಗೂ ಹಾಲು ಉತ್ಪಾದಕರಿಗೆ ಸ್ಮರಣೀಯ ಕ್ಷಣವಾಗಲಿದೆ.

