ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಾಗೂ ಪಕ್ಷದ ಆಂತರಿಕ ಒಪ್ಪಂದದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜೀನಾಮೆ ಸಲ್ಲಿಕೆ
ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಬೆಂಗಳೂರಿನಲ್ಲಿ ಇಲ್ಲದ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು.
ರಾಜೀನಾಮೆ ಸಲ್ಲಿಸಲು ತೆರಳಿದ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟದ ಹಲವು ಸಚಿವರು ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.
ಇದಕ್ಕೂ ಮೊದಲು ಬೆಳಗ್ಗೆ ನಡೆದ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ. ಈ ವೇಳೆ ಕೆಲ ಸಚಿವರು ಭಾವುಕರಾದರು ಎನ್ನಲಾಗಿದೆ.
ಡಿಕೆಶಿಗೆ ಸಿಎಂ ಪಟ್ಟ ಬಹುತೇಕ ಖಚಿತ
ಸಿದ್ದರಾಮಯ್ಯ ಅವರ ರಾಜೀನಾಮೆಯ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಮುಂದಿನ ನಾಯಕತ್ವಕ್ಕೆ ಡಿಕೆ ಶಿವಕುಮಾರ್ ಅವರ ಹೆಸರನ್ನು ಸಿದ್ದರಾಮಯ್ಯ ಸೂಚಿಸಿದ್ದು, ನಾಳೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಅಧಿಕೃತವಾಗಿ ನೂತನ ನಾಯಕರ ಆಯ್ಕೆ ನಡೆಯಲಿದೆ.
ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ
ಸಿದ್ದರಾಮಯ್ಯ ಅವರ ರಾಜೀನಾಮೆಯೊಂದಿಗೆ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಹೊಸ ಸಚಿವ ಸಂಪುಟ ರಚನೆ ಹಾಗೂ ರಾಜಕೀಯ ಸಮೀಕರಣಗಳ ಬಗ್ಗೆ ಭಾರೀ ಕುತೂಹಲ ಮೂಡಿದೆ.

