ಜೋಧ್ಪುರ : ಮೊಬೈಲ್ ಫೋನ್ ಬಳಕೆಯಲ್ಲಿ ಎಚ್ಚರಿಕೆ ಎಷ್ಟು ಮುಖ್ಯ ಎಂಬುದನ್ನು ಮತ್ತೊಮ್ಮೆ ನೆನಪಿಸುವ ಘಟನೆ ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದೆ. ವ್ಯಾಪಾರಿಯೊಬ್ಬರ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ದಿಢೀರನೆ ಸ್ಫೋಟಗೊಂಡು, ಹೊಗೆ ಕಕ್ಕಿದ ಪರಿಣಾಮ ಅವರು ಗಾಯಗೊಂಡ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೋಧ್ಪುರದ ಮಂಡೋರ್ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರಿ ತಮ್ಮ ಕೆಲಸದಲ್ಲಿ ನಿರತರಾಗಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬಿಸಿಯಾಗಿ ಸ್ಫೋಟಗೊಂಡಿದೆ. ಕ್ಷಣಾರ್ಧದಲ್ಲೇ ಪ್ಯಾಂಟ್ ಜೇಬಿನಿಂದ ಹೊಗೆ ಹೊರಬಂದಿದ್ದು, ಸುತ್ತಮುತ್ತಲಿದ್ದವರು ಆತಂಕಕ್ಕೊಳಗಾಗಿದ್ದಾರೆ.
ಸ್ಫೋಟದ ತೀವ್ರತೆಗೆ ವ್ಯಾಪಾರಿ ಗಾಯಗೊಂಡಿದ್ದು, ನೋವಿನಿಂದ ಕಿರುಚಿಕೊಂಡಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮೊಬೈಲ್ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಅಧಿಕ ಉಷ್ಣಾಂಶ, ಬ್ಯಾಟರಿ ದೋಷ ಅಥವಾ ತಾಂತ್ರಿಕ ಸಮಸ್ಯೆಯಿಂದ ಈ ಅವಘಡ ಸಂಭವಿಸಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.
ಮೊಬೈಲ್ ಬಳಸುವಾಗ ಈ ಮುನ್ನೆಚ್ಚರಿಕೆ ಅಗತ್ಯ
ಮೊಬೈಲ್ ಅನ್ನು ನೇರ ಬಿಸಿಲಿನಲ್ಲಿ ಇಡಬೇಡಿ.
ಅತಿಯಾದ ಶಾಖವಿರುವ ಸ್ಥಳಗಳಲ್ಲಿ ಫೋನ್ ಬಳಸುವುದನ್ನು ತಪ್ಪಿಸಿ.
ಬ್ಯಾಟರಿ ಉಬ್ಬಿದರೆ ತಕ್ಷಣ ಬದಲಾಯಿಸಿ.
ಚಾರ್ಜಿಂಗ್ ವೇಳೆ ಹೆಚ್ಚು ಬಳಕೆ ಮಾಡಬೇಡಿ.
ಮಲಗುವಾಗ ದಿಂಬಿನ ಕೆಳಗೆ ಅಥವಾ ಮುಚ್ಚಿದ ಸ್ಥಳದಲ್ಲಿ ಫೋನ್ ಇಡಬೇಡಿ.

