ಬೀಡಾಡಿ ಪ್ರಾಣಿಗಳ ಆಶ್ರಯ ತಾಣ ಪ್ರಾರಂಭಿಸಿ : ಜಿಲ್ಲಾಧಿಕಾರಿ ಸೂಚನೆ

0
27

ಉಡುಪಿ : ಬೀದಿ ನಾಯಿಗಳು ಹಾಗೂ ಬೀಡಾಡಿ ದನಗಳ ನಿಯಂತ್ರಣಕ್ಕೆ ಹಾಗೂ ಎಲ್ಲಾ ಪ್ರಾಣಿಗಳ ಜನನ ನಿಯಂತ್ರಣಕ್ಕೆ ಈಗಾಗಲೇ ಸವೋಚ್ಛ ನ್ಯಾಯಾಲಯವು ನಿರ್ದೇಶನ ನೀಡಿದ್ದು, ಅವುಗಳನ್ನು ಅನುಷ್ಠಾನಗೊಳಿಸಬೇಕು. ಬೀಡಾಡಿ ಪ್ರಾಣಿಗಳ ಆಶ್ರಯಕ್ಕೆ ಅಗತ್ಯವಿರುವ ಆಶ್ರಯ ತಾಣಗಳನ್ನು ಕೂಡಲೇ ಪ್ರಾರಂಭಿಸಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಖಾಸಗಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳು,ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹೆಚ್ಚುತ್ತಿರುವ ಹಾವಳಿ, ಅದರ ಪರಿಣಾಮವಾಗಿ ಉಂಟಾಗಬಹುದಾದದ ಅಪಾಯಗಳನ್ನು ತಡೆಯುವ ಉದ್ದೇಶದಿಂದ ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದ್ದು, ಅವುಗಳನ್ನು ತಪ್ಪದೇ ಪಾಲಿಸುವುದರೊಂದಿಗೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಈಗಾಗಲೇ ರೈಲ್ವೆ ಹಾಗೂ ಬಸ್ ನಿಲ್ದಾಣ, ಕ್ರೀಡಾ ಸಂಕೀರ್ಣ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿನ ಬೀದಿ ನಾಯಿಗಳ ಸಂಖ್ಯೆಯು 4405 ಗುರುತಿಸಲಾಗಿದೆ. ಪ್ರತಿಯೊಂದು ಸಂಸ್ಥೆಗಳಿಗೂ ಇವುಗಳ ನಿರ್ವಹಣೆ ಜವಾಬ್ದಾರಿಯನ್ನು ನೋಡಿಕೊಳ್ಳಲು ನೋಡೆಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದ ಅವರು, ಕೆಲವು ಸಂಸ್ಥೆಗಳು ಇವುಗಳ ನಿಯಂತ್ರಣಕ್ಕೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡದೇ ಇದ್ದಲ್ಲಿ ಕೂಡಲೇ ನೇಮಕ ಮಾಡಬೇಕೆಂದು ತಿಳಿಸಿದರು.

ಪ್ರತೀ ತಾಲೂಕಿನಲ್ಲಿಯೂ ಆಶ್ರಯ ತಾಣಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಬಾಕಿ ಉಳಿದಿರುವ ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕುಗಳಲ್ಲಿಯೂ ವಾರದ ಒಳಗಾಗಿ ಜಾಗ ಗುರುತಿಸಿ, ಎಸ್.ಓ.ಪಿ ಅನ್ವಯ ಅಗತ್ಯವಿರುವ ಆಹಾರ, ನೀರು, ನೆರಳು, ಪಶು ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುವಂತಹ ಆಶ್ರಯ ತಾಣಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದರು.
ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಎ.ಬಿ.ಸಿ ನಿಯಮಗಳಡಿ ಕ್ಯಾಪ್ಚರ್- ಸ್ಟೆರಿಲೈಸೇಷನ್ – ವ್ಯಾಕ್ಸಿನೇಷನ್ ಕಾರ್ಯವನ್ನು ನಿರಂತರವಾಗಿ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕು ಎಂದ ಅವರು, ಸಾಧ್ಯವಾದಲ್ಲಿ ನಾಯಿಗಳ ಹಿಡಿಯುವಿಕೆಯನ್ನು ಪೌರ ಕಾರ್ಮಿಕರು ಮುಂದೆ ಬಂದಲ್ಲಿ ಅವರಿಗೆ ಅಗತ್ಯ ತರಬೇತಿಯನ್ನು ನೀಡಬೇಕು ಎಂದರು. ಆಶ್ರಯ ತಾಣಗಳಲ್ಲಿ ಇರುವಂತಹ ಬೀಡಾಡಿ ನಾಯಿಗಳ ನಿರ್ವಹಣೆಗೆ ಯಾರಾದರೂ ದಾನಿಗಳು ಮುಂದೆ ಬಂದಲ್ಲಿ ದತ್ತು ಕಾರ್ಯಕ್ರಮದಡಿಯಲ್ಲಿ ಅವರ ಸಹಕಾರ ಪಡೆಯಲು ಮುಂದಾಗಬೇಕು. ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಇಲಾಖೆಗಳ ಸಹಭಾಗಿತ್ವದಲ್ಲಿ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ರೂಪಿಸಬೇಕು ಎಂದರು. ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕು ತಹಶೀಲ್ದಾರ್‌ಗಳು, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here